ಬೆಂಗಳೂರು, ಮಾ.11 (DaijiworldNews/PY): ಸಿ.ಡಿ ವಿಚಾರದ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ಕದನ ಏರ್ಪಟ್ಟಿದ್ದು, ಬಿಜೆಪಿ ಟ್ವೀಟ್ಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
"ಕನಸಿನಲ್ಲೂ ಲಭಿಸದ ಮುಖ್ಯಮಂತ್ರಿ ಪಟ್ಟಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಕದನ ಆರಂಭವಾಗಿದೆ. ಈ ಆಂತರಿಕ ಸಂಘರ್ಷ ಶಮನ ಮಾಡುವುದಕ್ಕೆ ಸುರ್ಜೇವಾಲಾ ಅವರನ್ನು ಮುಲಾಮು ಸಮೇತ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷದ ಒಂದು ಕುಟುಂಬ ನಿರ್ಧರಿಸಿದೆ. ನಾವಿಕನಿಲ್ಲದ ಕಾಂಗ್ರೆಸ್ ದಿಕ್ಕೆಟ್ಟು ನಿಂತಿದೆ" ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಬಿಜೆಪಿ ಟ್ವೀಟ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, "ಒಬ್ಬರ ಸಿಡಿ ತಯಾರಿಕೆಗೆ 20 ಕೋಟಿಯಂತೆ. ಅದರಂತೆ 23 ಜನರ ಸಿಡಿ ತಯಾರಿಕೆಗೆ 260 ಕೋಟಿ. ರಾಜ್ಯದಲ್ಲಿ ಬೇರೆಲ್ಲಾ ಉದ್ದಿಮೆಗಳು ಮುಚ್ಚಿ ಹೋದರೂ ಸಿಡಿ ಉದ್ಯಮದಕ್ಕೆ ನೂರಾರು ಕೋಟಿ ಹೂಡಿದವರಾರು?! ಈ ಬಿಜೆಪಿ vs ಬಿಜೆಪಿ ಯುದ್ಧದಲ್ಲಿ ನೀವು ಬೆತ್ತಲಾಗಿರುವುದನ್ನ ಜಗತ್ತು ನೋಡುತ್ತಿದೆ, ತುಂಡು ಬಟ್ಟೆಯನ್ನಾದರೂ ಮುಚ್ಚಿಕೊಳ್ಳಿ" ಎಂದು ವ್ಯಂಗ್ಯವಾಡಿದೆ.
"ವಿಪಕ್ಷ ನಾಯಕ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಇತ್ತೀಚೆಗೆ ಮೈಸೂರು ಮೇಯರ್ ವಿಚಾರದಲ್ಲಿ ಸಂಘರ್ಷವೇರ್ಪಟ್ಟಿತ್ತು. ಅದು ಕೇವಲ ಮನಸ್ತಾಪವಾಗಿರಲಿಲ್ಲ, ಅದು ಸಿಎಂ ಕುರ್ಚಿಗಾಗಿ ನಡೆದ ಕದನವಾಗಿತ್ತು.ಇಬ್ಬರು ಮುಖ್ಯಮಂತ್ರಿ ಅಭ್ಯರ್ಥಿಗಳು ಪಕ್ಷದಲ್ಲಿ ಹಿಡಿತ ಸಾಧಿಸಲು ಹೆಣಗಾಡುತ್ತಿದ್ದಾರೆ" ಎಂದು ಬಿಜೆಪಿ ತಿಳಿಸಿದೆ.
"ಬೊಮ್ಮಾಯಿ-ಯತ್ನಾಳ್, ರೇಣುಕಾಚಾರ್ಯ- ಸುಧಾಕರ್, ಸವದಿ-ಜಾರಕಿಹೊಳಿ, ಸಂತೋಷ್-ಬಿಎಸ್ವೈ, ಆಯನೂರು-ಈಶ್ವರಪ್ಪ, ಶ್ರೀನಿವಾಸ್ ಪ್ರಸಾದ್-ಬಿಜೆಪಿ, ವಿಜಯೇಂದ್ರ-ಕಟೀಲ್ ದೋಸೆ ತೂತೆಂದರೂ ಸರಿ ಎನ್ನಬಹುದಿತ್ತು, ನಿಮ್ಮ ಕಾವಲಿಯೇ ನೂರಾರು ತೂತಾಗಿದೆ! ಸೋಮವಾರದ ಸದನದಲ್ಲಿ ನಿಮ್ಮವರೇ ಯುದ್ಧಕ್ಕೆ ಸನ್ನದ್ಧರಾಗಿದ್ದಾರೆ, ಎಚ್ಚರವಹಿಸಿ!" ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಟಾಂಗ್ ನೀಡಿದೆ.