ನವದೆಹಲಿ, ಮಾ.11 (DaijiworldNews/PY): "ಪಾಕಿಸ್ತಾನಕ್ಕೆ ಮಾರ್ಚ್ನಲ್ಲಿ ಸುಮಾರು 45 ಮಿಲಿಯನ್ ಮೇಡ್ ಇನ್ ಇಂಡಿಯಾ ಕೊರೊನಾ ಲಸಿಕೆ ತಲುಪಲಿದೆ" ಎಂದು ಪಾಕಿಸ್ತಾನದ ದಿನಪತ್ರಿಕೆಯೊಂದು ಪ್ರಕಟಿಸಿದೆ.
ಸಾಂದರ್ಭಿಕ ಚಿತ್ರ
ಇದು ಕೋವಿಶೀಲ್ಡ್ನ ಮೊದಲ ಬ್ಯಾಚ್ ಆಗಿದ್ದು, ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅಭಿವೃದ್ದಿಪಡಿಸಿದ ಲಸಿಕೆ ಭಾರತದ ನೆರೆಯ ದೇಶವನ್ನು ತಲುಪಲಿದೆ.
"ಯುನೈಟೆಡ್ ಗವಿ ಅಲೈಯನ್ಸ್ ಒಪ್ಪಂದದ ಪ್ರಕಾರ ಇದನ್ನು ಸ್ವೀಕರಿಸಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ. 16 ಮಿಲಿಯನ್ ಡೋಸ್ಗಳು ಈ ಜೂನ್ವರೆಗೂ ಪೂರೈಕೆಯಾಗಲಿವೆ" ಎಂದು ತಿಳಿಸಿದೆ.
"ಮುಂಚೂಣಿ ಕಾರ್ಮಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಒಟ್ಟು 27 ಮಿಲಿಯನ್ ಜನರಿಗೆ ಪಾಕಿಸ್ತಾನದಲ್ಲಿ ಕೊರೊನಾ ಲಸಿಕೆ ಹಾಕಲಾಗಿದೆ" ಎಂದು ಪಾಕಿಸ್ತಾನದ ರಾಷ್ಟ್ರೀಯ ಆರೋಗ್ಯ ಸೇವೆಗಳು, ನಿಯಂತ್ರಣ ಮತ್ತು ಸಮನ್ವಯಗಳ ಸಂಯುಕ್ತ ಕಾರ್ಯದರ್ಶಿ ಆಮೀರ್ ಅಶ್ರಫ್ ಖವಾಜಾ ತಿಳಿಸಿದ್ದಾರೆ.
"ಮುಂಚೂಣಿ ಆರೋಗ್ಯ ಕಾರ್ಯಕರ್ತರು ಹಾಗೂ 65 ವರ್ಷ ಮೇಲ್ಪಟ್ಟ ಜನರಿಗೆ ಲಸಿಕೆ ಕಾರ್ಯಕ್ರಮದಲ್ಲಿ ಆದ್ಯತೆ ನೀಡಲು ಸರ್ಕಾರ ನಿರ್ಧರಿಸಿದೆ" ಎಂದು ಅವರು ಹೇಳಿದ್ದಾರೆ.
ಪಾಕ್ನೊಂದಿಗೆ 2020ರ ಸೆಪ್ಟೆಂಬರ್ನಲ್ಲಿ ಮಾಡಿಕೊಳ್ಳಲಾದ ಕೊರೊನಾ ಲಸಿಕೆ ನೆರವು ಒದಗಿಸುವ ಗವಿ ಒಪ್ಪಂದಕ್ಕೆ ಅನುಗುಣವಾಗಿ ಈ ಲಸಿಕೆಗಳ ನೆರವನ್ನು ನೀಡಲಾಗುತ್ತಿದೆ.
"ಮಾರ್ಚ್ ಮೊದಲ ವಾರದಲ್ಲಿ ಕೊರೊನಾ ಲಸಿಕೆಯು ಒಪ್ಪಂದದ ಪ್ರಕಾರ ಬರಲಿದೆ ಎಂದು ನಿರೀಕ್ಷಿಸಿದ್ದೆವು. ಆದರೆ, ರವಾನೆ ವಿಳಂಬವಾಗಿದೆ" ಎಂದು ಆರೋಗ್ಯ ಕಾರ್ಯದರ್ಶಿ ತಿಳಿಸಿದ್ದಾರೆ.