ಕನ್ಯಾಕುಮಾರಿ, ಮಾ.11 (DaijiworldNews/MB) : ಕಾಂಗ್ರೆಸ್ ಸಂಸದ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. 5,900 ರೂಪಾಯಿಯ ಕ್ರೀಡಾ ಶೂವನ್ನು 11 ವರ್ಷದ ಆಂಟನಿ ಫೆಲಿಕ್ಸ್ಗೆ ಉಡುಗೊರೆಯಾಗಿ ನೀಡಿದ್ದಾರೆ.
''ನಾನು ನಿನ್ನೆ (ಮಂಗಳವಾರ) ಕೊರಿಯರ್ ಮೂಲಕ ಬೂಟುಗಳನ್ನು ಸ್ವೀಕರಿಸಿದೆ. ರಾಹುಲ್ ಗಾಂಧಿ ಸರ್ ಕೂಡ ಮಂಗಳವಾರ ರಾತ್ರಿ ನನಗೆ ಕರೆ ಮಾಡಿ ನನಗೆ ಶೂ ಇಷ್ಟವಾಯಿತೆ. ನನ್ನ ಕಾಲಿನ ಗಾತ್ರಕ್ಕೆ ಸರಿಯಾಗಿದೆಯೇ ಎಂದು ಕೇಳಿದರು'' ಎಂದು ಮಾಧ್ಯಮಕ್ಕೆ ಸಂಭ್ರಮದಿಂದ ತಿಳಿಸಿದ್ದಾನೆ ಬಾಲಕ.
''ರಾಹುಲ್ ಅಥ್ಲೆಟಿಕ್ಸ್ನಲ್ಲಿ ಉತ್ತಮ ಸಾಧನೆ ಮಾಡುವಂತೆ ಬಾಲಕನಿಗೆ ಮನವಿ ಮಾಡಿದ್ದು ಇದಕ್ಕಾಗಿ ಸಹಾಯ ಮಾಡಲು ನಾನು ಸಂಪರ್ಕದಲ್ಲಿಯೇ ಇರುವೆನು ಎಂದು ಹೇಳಿದ್ದಾರೆ'' ಎಂದರು
ಮಾರ್ಚ್ 1 ರಂದು ಕನ್ಯಾಕುಮಾರಿ-ತಿರುವನಂತಪುರಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಗ್ರೆಸ್ ನಾಯಕರ ಚಿತ್ರಗಳನ್ನು ಹಿಡಿದು ಬರಿಗಾಲಿನಲ್ಲಿ ನಿಂತಿದ್ದ 4 ನೇ ತರಗತಿ ವಿದ್ಯಾರ್ಥಿ ಮತ್ತು ಅವನ ಸ್ನೇಹಿತರನ್ನು ರಾಹುಲ್ ಗಾಂಧಿ ನೋಡಿದ್ದರು. ಕೂಡಲೇ ರಾಹುಲ್ ಅವರು ತಮ್ಮ ವಾಹನವನ್ನು ನಿಲ್ಲಿಸಲು ಸೂಚಿಸಿ ಬಾಲಕರೊಂದಿಗೆ ಮಾತುಕತೆ ನಡೆಸಿದ್ದರು. ಬಾಲಕ ಕ್ರೀಡಾಪಟು ಎಂದು ತಿಳಿದ ನಂತರ, ರಾಹುಲ್ ಬಾಲಕನಿಗೆ ಉತ್ತಮ ಜೋಡಿ ಕ್ರೀಡಾ ಶೂಗಳನ್ನು ಉಡುಗೊರೆಯಾಗಿ ನೀಡುವುದಾಗಿ ಭರವಸೆ ನೀಡಿದರು ಹಾಗೂ ಬಾಲಕನಿಗೆ ಕೆಲವು ಸಲಹೆಗಳನ್ನು ನೀಡಿದ್ದರು.
''ನನ್ನ ಮಗನ ಪಾದದ ಗಾತ್ರ ನಮಗೆ ತಿಳಿದಿರಲಿಲ್ಲ. ಆದ್ದರಿಂದ ರಾಹುಲ್ ಅವರ ವೈಯಕ್ತಿಕ ಸಹಾಯಕ ಮೂರು ದಿನಗಳ ನಂತರ ನನ್ನನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಕ್ರೀಡಾ ಅಂಗಡಿಗೆ ಕರೆದೊಯ್ಯಲು ಮತ್ತು ಆತನ ಪಾದದ ಗಾತ್ರವನ್ನು ಅಳೆದು ಗಾತ್ರ ತಿಳಿಸಲು ಹೇಳಿದರು. ಮಂಗಳವಾರ, ನಾವು ಕೊರಿಯರ್ ಸ್ವೀಕರಿಸಿದ್ದೇವೆ. ಇದು ನನ್ನ ಹುಡುಗನಿಗೆ ದೊಡ್ಡ ಪ್ರೇರಣೆಯಾಗಲಿದೆ'' ಎಂದು ಫೆಲಿಕ್ಸ್ ತಂದೆ ಎಂ ಆಂಟನಿ ಜೇವಿಯರ್ ಹೇಳಿದ್ದಾರೆ. ಅವರು ತಿರುಚ್ಚಿಯಲ್ಲಿ ಮರದ ವ್ಯಾಪಾರ ಮತ್ತು ಕನ್ಯಾಕುಮಾರಿ ಜಿಲ್ಲೆಯಲ್ಲಿ ಒಂದು ಸಣ್ಣ ಜವಳಿ ಮಳಿಗೆ ನಡೆಸುತ್ತಿದ್ದಾರೆ.
''ಮಗನಿಗೆ ಚಿಕ್ಕ ವಯಸ್ಸಿನಿಂದಲೂ ಅಥ್ಲೆಟಿಕ್ಸ್ನಲ್ಲಿ ಆಸಕ್ತಿ. ಆದರೆ ಸರಿಯಾದ ಮಾರ್ಗದರ್ಶನ ಮತ್ತು ತರಬೇತಿಯನ್ನು ಪಡೆದಿಲ್ಲ. ಆದರೂ ಮುಂಜಾನೆ ಅಭ್ಯಾಸಕ್ಕಾಗಿ ಅವನೊಂದಿಗೆ ಹೋಗುವ ಮೂಲಕ ನಾನು ಅವನನ್ನು ಪ್ರೋತ್ಸಾಹಿಸುತ್ತೇನೆ. ಅವನು ಬೆಳಿಗ್ಗೆ 4 ಗಂಟೆಗೆ ಎದ್ದು 90 ನಿಮಿಷಗಳ ಕಾಲ ಅಭ್ಯಾಸ ಮಾಡುತ್ತಾನೆ'' ಎಂದು ಜೇವಿಯರ್ ಹೇಳಿದರು.
''2017 ರಲ್ಲಿ ಅವನು 5 ಕಿ.ಮೀ ಮಿನಿ ಮ್ಯಾರಥಾನ್ ಅನ್ನು 19 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ. ನಾನು ಈಗ ಅದೇ ದೂರವನ್ನು 15 ನಿಮಿಷ ಮತ್ತು ಒಂದು ಗಂಟೆಯಲ್ಲಿ 15 ಕಿ.ಮೀ ದೂರ ಓಡಬಲ್ಲೆ. ರಾಹುಲ್ ಗಾಂಧಿ ಸರ್ ನನಗೆ ಸರಿಯಾದ ಕೋಚಿಂಗ್ ಪಡೆಯಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ'' ಎಂದು ಹೇಳಿದ ಫೆಲಿಕ್ಸ್, ''ದೇಶಕ್ಕೆ ಪ್ರಶಸ್ತಿ ತಂದು ಕೊಡುವ ರಾಹುಲ್ ಅವರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತೇನೆ'' ಎಂದು ಭರವಸೆ ನೀಡಿದನು.