ರಾಯ್ಪುರ, ಮಾ.11 (DaijiworldNews/PY): ಇಬ್ಬರು ಸಹೋದರಿಯರಿಗೆ 2017ರಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ ನಕಲಿ ವೈದ್ಯರಿಗೆ ಬುಧವಾರ ತ್ವರಿತ ನ್ಯಾಯಾಲಯ ತಲಾ 40 ವರ್ಷ ಜೈಲು ಶಿಕ್ಷೆ ವಿಧಿಸಿದೆ.
"ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಎರಡು ಶಿಕ್ಷೆಗಳು ಒಂದರ ಬಳಿಕ ಒಂದು ಸತತವಾಗಿ ಜಾರಿಯಾಗಲಿವೆ. ಇದು 40 ವರ್ಷಗಳ ಜೈಲು ಶಿಕ್ಷೆಯಾಗಿದೆ. ನ್ಯಾಯಾಲಯವು ಅಪರಾಧಿಗೆ 10,000 ರೂ.ಗಳ ದಂಡ ವಿಧಿಸಿದೆ" ಎಂದು ವಿಶೇಷ ಸಾರ್ವಜನಿಕ ಅಭಿಯೋಜಕ ತಾರಚಂದ್ ಕೊಸಲೆ ತಿಳಿಸಿದ್ದಾರೆ.
"ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪೂಜಾ ಜೈಸ್ವಾಲ್ ಅವರು ಪ್ರಕರಣದ ವಿಚಾರಭೆ ನಡೆಸಿದ್ದು, ಐಪಿಸಿ ಸೆಕ್ಷನ್ ಅಡಿಯಲ್ಲಿ ಗಾಂಧಿ ನಗರ ನಿವಾಸಿ ಸಮಯ್ ಲಾಲ್ ದೆವಾಂಗನ್(48) ಗೆ 40 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಚಿಕಿತ್ಸೆ ನೀಡುವ ನೆಪದಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದ ಕಾರಣ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ" ಎಂದಿದ್ದಾರೆ.
"2016ರ ಡಿಸೆಂಬರ್ನಲ್ಲಿ, 21 ಹಾಗೂ 19 ವರ್ಷದ ಸಂತ್ರಸ್ತ ಯುವತಿಯನ್ನು ಅವರ ಕುಟುಂಬದವರು ಹೊಟ್ಟೆ ಹಾಗೂ ಸೊಂಟದ ನೋವಿನ ಚಿಕಿತ್ಸೆಗಾಗಿ ಈ ನಕಲಿ ವೈದ್ಯರ ಬಳಿ ಕರೆದೊಯ್ದಿದ್ದರು. ಆದರೆ, ಆತ ಬ್ಲ್ಯಾಕ್ ಮ್ಯಾಜಿಕ್ ಮೂಲಕ ಗುಣಪಡಿಸುವ ನೆಪದಲ್ಲಿ 2017ರ ಆರಂಭದಿಂದ ಇಬ್ಬರು ಸಹೋದರಿಯರ ಮೇಲೆ ಅತ್ಯಾಚಾರವೆಸಗಲು ಪ್ರಾರಂಭಿಸಿದ್ದು, ಈ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದ್ದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ" ಎಂದು ಬೆದರಿಕೆ ಹಾಕಿದ್ದ ಎಂದು ಪ್ರಾಸಿಕ್ಯೂಟರ್ ಹೇಳಿದ್ದಾರೆ.
"ಸಂತ್ರಸ್ತ ಯುವತಿಯರು ಈ ಬಗ್ಗೆ ಪೋಷಕರಿಗೆ ತಿಳಿಸಿದ ವೇಳೆ ಅಪರಾಧ ಬೆಳಕಿಗೆ ಬಂದಿದ್ದು, ಬಳಿಕ ಅವರು ಗುಧಿಯಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು" ಎಂದಿದ್ದಾರೆ.