ಕೋಲ್ಕತ್ತಾ, ಮಾ11 (DaijiworldNews/MS): ಪಶ್ಚಿಮ ಬಂಗಾಳ ಚುನಾವಣಾ ಕಣ ಅಕ್ಷರಶಃ ಕದನ ಕಣವಾಗಿ ಬದಲಾಗಿದೆ. ನಂದಿಗ್ರಾಮದಲ್ಲಿ ಪ್ರಚಾರದ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದ್ದು, ಕೋಲ್ಕತ್ತಾದ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಎಡಗಾಲಿಗೆ, ಸೊಂಟ, ಭುಜ ಮತ್ತು ಕುತ್ತಿಗೆಗೆ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಘಟನೆ ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದು ಟಿಎಂಸಿ ಹಾಗೂ ವಿಪಕ್ಷ ನಾಯಕರು ನಾನಾ ಆರೋಪ ಮಾಡುತ್ತಿದ್ದಾರೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿರುವ ದೀದಿ ವಿಡಿಯೋ ಬಿಡುಗಡೆ ಮಾಡಿದ್ದು, ಜನರು, ಪಕ್ಷದ ಕಾರ್ಯಕರ್ತರು ಶಾಂತಚಿತ್ತರಾಗಿ, ಸಂಯಮದಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಇನ್ನು ಗಾಯ ಚುನಾವಣಾ ಕಾರ್ಯಕ್ಕೆ ಅಡ್ಡಿ ಮಾಡುವುದಿಲ್ಲ. ಆದ್ರೆ, ಕೆಲ ಕಾಲ ವೀಲ್ ಚೇರ್ʼನಲ್ಲಿಯೇ ಕುಳಿತಕೊಳ್ಳಬೇಕಾಗುತ್ತೆ ಎಂದು ಸಿಎಂ ಹೇಳಿದ್ದಾರೆ.
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಗುರುವಾರ ಭಾರತೀಯ ದಂಡಸಂಹಿತೆ ಐಪಿಸಿ ಸೆಕ್ಷನ್ 341 ಮತ್ತು 323ರಡಿ ಕೇಸು ಕೇಸು ದಾಖಲಾಗಿದೆ. ಟಿಎಂಸಿ ನಾಯಕ ಶೇಖ್ ಸುಫಿಯಾನ್ ನೀಡಿರುವ ದೂರಿನ ಮೇಲೆ ಪೊಲೀಸರು ಕೇಸು ದಾಖಲಿಸಿದ್ದಾರೆ.
ದೂರಿನ ಅನ್ವಯ ನಮ್ಮ ತನಿಖೆ ಮುಂದುವರಿದಿದ್ದು ಸಾಕ್ಷಿಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ಪುರ್ಬ ಮೇದಿನೀಪುರ್ ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.