ಮೈಸೂರು,ಮಾ.11 (DaijiworldNews/HR): "ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿರುವುದು ತಿಪ್ಪೇ ಸಾರಿಸೋ ಕೆಲಸವಾಗಿದ್ದು, ಎಸ್ಐಟಿ ತನಿಖೆ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ" ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್ಐಟಿ ತನಿಖೆಯಲ್ಲಿ ಜೈಲಿಗೆ ಹೋದ ಉದಾಹರಣೆಗಳಿಲ್ಲ, ಹಾಗಾಗಿ ಇದು ಕೂಡ ನಕಲಿ ಸಿಡಿ ಎನ್ನುವ ವರದಿ ಬರುತ್ತದೆ. ಇಲ್ಲಿಯವರೆಗೆ ನಡೆದ ಇಂತಹ ಅನೇಕ ತನಿಖೆಯಂತೆ ಇದೂ ಕೂಡ ಮೂಲೆ ಸೇರಲಿದೆ" ಎಂದರು
ಇನ್ನು "ಎಸ್ಐಟಿಯು ಕಾಟಾಚಾರಕ್ಕಾಗಿ ನಡೆಸುವ ತನಿಖೆಯಾಗಿದ್ದು, ರಾಜಕಾರಣದಲ್ಲಿ ನೇರವಾಗಿ ಯುದ್ಧ ಮಾಡೋಣ. ಇಂತಹ ಆರೋಪ ಹೊತ್ತುಕೊಂಡಿರುವಾಗ ಪ್ರತಿದಿನ ಜನರ ಮುಂದೆ ಹೋಗಿ ನಿಂತು ಜನರಿಗೆ ಏನೆಂದು ಉತ್ತರ ಕೊಡುತ್ತೀರಿ? ರಾಜಕಾರಣವನ್ನು ಈ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸರಿಯಲ್ಲ" ಎಂದು ಹೇಳಿದ್ದಾರೆ.