ನವದೆಹಲಿ, ಮಾ.11 (DaijiworldNews/MB) : ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿ, ನಂತರ ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಗೊಂಡಿದ್ದ ಮೂಗ ಮತ್ತು ಕಿವುಡ ಯುವತಿ ಗೀತಾ ಕೊನೆಗೂ ತಾಯಿ ಮಡಿಲು ಸೇರಿದ್ದಾರೆ.
ಗೀತಾ ಪಾಕಿಸ್ತಾನದಿಂದ ಭಾರತಕ್ಕೆ ಬಂದು ಬರೊಬ್ಬರಿ 5 ವರ್ಷಗಳಾಗಿದೆ. ಆದರೆ ಆಕೆ ತನ್ನ ನೈಜ ತಾಯಿಯನ್ನು ಸೇರಿರಲಿಲ್ಲ. ಈಗ, ''ಮಹಾರಾಷ್ಟ್ರದಲ್ಲಿ ಗೀತಾಳ ಅಮ್ಮ ಪತ್ತೆಯಾಗಿದ್ದು, ಆಕೆಯನ್ನು ತಾಯಿಯೆಡೆ ಕರೆದೊಯ್ಯಲಾಗಿದೆ'' ಎಂದು ಈವರೆಗೂ ಆಕೆಯನ್ನು ತಮ್ಮ ರಕ್ಷಣೆಯಲ್ಲಿ ಇರಿಸಿಕೊಂಡಿದ್ದ ಪಾಕಿಸ್ತಾನದ ಈಧಿ ವೆಲ್ಫೇರ್ ಟ್ರಸ್ಟ್ ಮುಖ್ಯಸ್ಥೆ ಬಿಲ್ಕೀಸ್ ಈಧಿ ಹೇಳಿದ್ದಾರೆ. ಈ ವಾರದ ಅಂತ್ಯದಲ್ಲಿ ಆಕೆ ತನ್ನ ನೈಜ ತಾಯಿಯನ್ನು ಭೇಟಿಯಾದ ಸಿಹಿ ಸುದ್ದಿ ನನಗೆ ನೀಡಿದ್ದಾಳೆ ಎಂದು ಹೇಳಿದ್ದಾರೆ.
''ಮೂಗ ಮತ್ತು ಕಿವುಡ ಯುವತಿಗೆ ಈಧಿ ಫೌಂಡೇಷನ್ ಗೀತಾ ಎಂದು ಹೆಸರಿಟ್ಟಿತ್ತು. ಆದರೆ ಆಕೆಯ ನಿಜವಾದ ಹೆಸರು ರಾಧಾ ವಾಘ್ಮೋರೆ. ಮಹಾರಾಷ್ಟ್ರದ ನೈಗಾನ್ ಗ್ರಾಮದಲ್ಲಿನ ತನ್ನ ತಾಯಿಯನ್ನು ಆಕೆ ಸೇರಿಕೊಂಡಿದ್ದಾಳೆ. ಆಕೆ ಪಾಕಿಸ್ತಾನದಲ್ಲಿ ಬೀದಿ ಪಾಲಾಗಿ ಯಾವುದೇ ಆಶ್ರಯವಿಲ್ಲದೆ ಕಂಗಲಾಗಿದ್ದಳು. ಆಕೆಯನ್ನು ನಾವು ಕರಾಚಿಯಲ್ಲಿ ನೋಡಿ ರಕ್ಷಿಸಿದ್ದೆವು'' ಎಂದು ಬಿಲ್ಕೀಸ್ ಈಧಿ ತಿಳಿಸಿದ್ದಾರೆ.
2015ರಲ್ಲಿ ಪಾಕಿಸ್ತಾನದಲ್ಲಿ ಸಿಕ್ಕ ಬಾಲಕಿ ಭಾರತೀಯಳು ಎಂದು ತಿಳಿದ ಬಳಿಕ ಆಕೆಯನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿತ್ತು. ಇದರಲ್ಲಿ ಆಗಿನ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಗ ಆಕೆ ಸುಮಾರು 11-12 ವರ್ಷದವಳಾಗಿದ್ದಳು. ಆದರೆ ಮಾತು ಬಾರದ ಮತ್ತು ಕಿವಿ ಕೇಳದ ಕಾರಣ ಆಕೆಯ ಪೋಷಕರ ಪತ್ತೆ ಕಷ್ಟವಾಗಿತ್ತು. ಈಗ ಸುಮಾರು ಐದು ವರ್ಷದ ಬಳಿಕ ತನ್ನ ತಾಯಿಯನ್ನು ಸೇರಿದ್ದಾಳೆ.
''ಗೀತಾಳ ತಂದೆ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದು ಬಳಿಕ ಗೀತಾಳ ತಾಯಿ ಮೀನಾ ಮರು ಮದುವೆಯಾಗಿದ್ದರು. ಈಗ ಆಕೆಯ ಡಿಎನ್ಎ ಪರೀಕ್ಷೆ ನಡೆಸಲಾಗಿದ್ದು ಗೀತಾ ಆಕೆಯ ಮಗಳೆಂದು ದೃಢಪಟ್ಟಿದೆ. ಗೀತಾ ಕೂಡಾ ತನ್ನ ತಾಯಿಯನ್ನು ಗುರುತಿಸಿದ್ದಾಳೆ'' ಎನ್ನುತ್ತಾರೆ ಬಿಲ್ಕೀಸ್.