ಬೆಂಗಳೂರು, ಮಾ.11 (DaijiworldNews/MB) : ''ತಲಾ 25 ರಿಂದ 30 ಲಕ್ಷ ರೂ.ಗೆ ಮೈಮುಲ್ನಲ್ಲಿ 150 ಹುದ್ದೆಯನ್ನು ಮಾರಾಟ ಮಾಡಲಾಗಿದೆ'' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಮೈಸೂರು-ಚಾಮರಾಜನಗರ ಹಾಲು ಉತ್ಪಾದಕರ ಸಹಕಾರ ಸಂಘ (ಮೈಮುಲ್)ನಲ್ಲಿ ಸುಮಾರು 150 ಹುದ್ದೆಗಳನ್ನು ತಲಾ 25 ರಿಂದ 30 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಇದರಿಂದಲೇ 50-60 ಕೋಟಿ ಸಂಗ್ರಹ ಮಾಡಲಾಗಿದೆ'' ಎಂದು ಆರೋಪಿಸಿದರು.
''ಯಾರು ಈ ಹಣವನ್ನು ಸಂಗ್ರಹ ಮಾಡಿದ್ದಾರೆ ಎಂದು ನಾನು ನೋಡಿದ್ದೇನೆ. ಸಾರ್ವಜನಿಕರಿಗೆ ಅನುಕೂಲಕರವಾದ ಸಹಕಾರ ಕ್ಷೇತ್ರ ವ್ಯವಸ್ಥೆ ಈಗ ಇಲ್ಲ. ಈ ರೀತಿ ಜನರಿಂದು ಲೂಟಿ ಮಾಡಿದ ಹಣ ಚುನಾವಣೆಗೂ ಬಳಕೆ ಮಾಡಲಾಗುತ್ತಿದೆ'' ಎಂದು ಕೂಡಾ ದೂರಿದ್ದಾರೆ.
''ನಾವು ನಂಬಿರುವವರು ನಮ್ಮೊಂದಿಗೆ ಇಲ್ಲ. ಹೊಸ ನಾಯಕತ್ವ ಅನಿವಾರ್ಯವಾಗಿದ್ದು ಅದಕ್ಕಾಗಿ ನಾವು 7 ಜನರ ಸಿಂಡಿಕೇಟ್ ಮಾಡಿದ್ದೇವೆ'' ಎಂದು ಹೇಳಿದ ಅವರು, ಪಿರಿಯಾಪಟ್ಟಣ, ಎಚ್.ಡಿ. ಕೋಟೆ, ಹುಣುಸೂರಿನಲ್ಲಿ ತಾನೇ ಸಭೆ ಮಾಡುವುದಾಗಿ ತಿಳಿಸಿದರು.