ನವದೆಹಲಿ, ಮಾ.11 (DaijiworldNews/MB) : ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಅವರು ಹೇಳಿದ್ದು ಗಾಯಗೊಂಡಿರುವ ಅವರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆಲವು ಕಾಂಗ್ರೆಸ್, ಟಿಎಂಸಿ, ಎಎಪಿ ನಾಯಕರು ಮಮತಾಗೆ ಮೇಲಿನ ದಾಳಿಗೆ ಪಕ್ಷಾತೀತ ಬೆಂಬಲ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಕಾಂಗ್ರೆಸ್, ಬಿಜೆಪಿ ನಾಯಕರು ಇದು ಬೂಟಾಟಿಕೆ ಎಂದು ಹೇಳಿದ್ದಾರೆ. ಘಟನಾ ಸ್ಥಳದಲ್ಲಿದ್ದ ಕೆಲ ಜನರು ನೀಡಿದ ಹೇಳಿಕೆ ಇದಕ್ಕೆ ಪುಷ್ಠಿ ನೀಡುವಂತಿದೆ. ಪಶ್ಚಿಮ ಬಂಗಾಳ ಸಿಎಂ ಮೇಲೆ ಯಾರೂ ದಾಳಿ ಮಾಡಿಲ್ಲ, ಆಕೆಯ ಕಾರು ಕಂಬಕ್ಕೆ ಡಿಕ್ಕಿ ಹೊಡೆದು ಕಾರಿನ ಬಾಗಿಲು ಮುಚ್ಚಿದೆ. ಇದರಿಂದಾಗಿ ಅವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
''ನಾಮಪತ್ರ ಸಲ್ಲಿಕೆಯ ಬಳಿಕ ಅವರ ಬಿರುಲಿಯಾ ಬಜಾರ್ನಲ್ಲಿ ನಾಗರಿಕರೊಂದಿಗೆ ಮಾತುಕತೆ ನಡೆಸಿ ಅಲ್ಲಿಂದ ಕಾರಿಗೆ ಹತ್ತುತ್ತಿದ್ದಂತೆ ಏಕಾಏಕಿ ಕೆಲವು ವ್ಯಕ್ತಿಗಳು ತಳ್ಳಾಟ ನಡೆಸಿ ಇದರಿಂದ ಕಾಲಿಗೆ ಏಟಾಗಿದೆ. ನನ್ನನ್ನು ತಳ್ಳಿದ್ದಾರೆ'' ಎಂದು ಮಮತಾ ಅವರು ಹೇಳಿದ್ದಾರೆ. ''ಘಟನೆಯ ಸಮಯದಲ್ಲಿ ತನ್ನ ಸುತ್ತ ಯಾವುದೇ ಪೊಲೀಸ್ ಸಿಬ್ಬಂದಿ ಇರಲಿಲ್ಲ'' ಎಂದು ಅವರು ಹೇಳಿಕೊಂಡಿದ್ದು, ''ಇದು ಯೋಜಿತ ಪಿತೂರಿಯ ಭಾಗವಾಗಿದೆ'' ಎಂದಿದ್ದಾರೆ. ''ನನ್ನನ್ನು ಚುನಾವಣಾ ಪ್ರಚಾರದಿಂದ ದೂರವಿಡಲು ಈ ದಾಳಿ ನಡೆಸಲಾಗಿದೆ'' ಎಂದು ಅವರು ಆರೋಪಿಸಿದ್ದಾರೆ.
ಆದರೆ ಈ ಆರೋಪವನ್ನು ಪ್ರತ್ಯಕ್ಷದರ್ಶಿಗಳು ನಿರಾಕರಿಸಿದ್ದಾರೆ. ''ಮಮತಾ ಬ್ಯಾನರ್ಜಿ ನೀಡಿದ ಸಂಪೂರ್ಣ ಮಾಹಿತಿ ಸುಳ್ಳು. ಇದು ಅಪಘಾತ. ಆ ಸಮಯದಲ್ಲಿ ಮಮತಾ ಅವರಿಗೆ ಪೊಲೀಸ್ ರಕ್ಷಣೆಯಿತ್ತು'' ಎಂದು ಹೇಳುವ ಮೂಲಕ ಘಟನೆಯ ಸಮಯದಲ್ಲಿ ತನ್ನ ಸುತ್ತಲೂ ಪೊಲೀಸ್ ರಕ್ಷಣೆ ಇರಲಿಲ್ಲ ಎಂಬ ಹೇಳಿಕೆಯನ್ನು ಪ್ರತ್ಯಕ್ಷದರ್ಶಿಗಳು ನಿರಾಕರಿಸಿದ್ದಾರೆ.
ಹಾಗಿರುವಾಗ ಸಿಎಂಗೆ ಹೇಗೆ ಗಾಯವಾಯಿತು ಎಂದು ವಿವರಿಸಿದ ಪ್ರತ್ಯಕ್ಷದರ್ಶಿಗಳು, ''ಮಮತಾ ಬ್ಯಾನರ್ಜಿ ತಮ್ಮ ಕಾರಿನಲ್ಲಿ ಕುಳಿತು ಸಭಿಕರಿಗೆ ನಮಸ್ಕಾರ ಮಾಡುತ್ತಿದ್ದರು. ಕಾರು ಚಲಿಸುತ್ತಿತ್ತು, ಮತ್ತು ರಸ್ತೆ ಬದಿಯಲ್ಲಿ ಕಾಯುತ್ತಿದ್ದ ಜನರಿಗೆ ನಮಸ್ಕಾರ ಮಾಡಲು ಕಾರಿನ ಬಾಗಿಲು ತೆರೆಯಲಾಗಿತ್ತು. ನಂದಿಗ್ರಾಮ್ನ ಬಿರುಲಿಯಾ ಬಜಾರ್ನಲ್ಲಿ, ಚಲಿಸುವ ಕಾರಿನ ತೆರೆದ ಬಾಗಿಲು ಕಂಬಕ್ಕೆ ಬಡಿದು ಬಾಗಿಲು ಒಮ್ಮೆಲೇ ಮುಚ್ಚಿದೆ. ಮಮತಾ ಬ್ಯಾನರ್ಜಿಯ ಕಾಲಿಗೆ ಈ ಬಾಗಿಲು ಬಡಿದು ಗಾಯವಾಗಿದೆ'' ಎಂದು ಹೇಳಿದ್ದಾರೆ.
''ಆ ಕಂಬವು ಚಿಕ್ಕದಾಗಿದ್ದ ಕಾರಣ ಚಾಲಕ ಗಮನಿಸಿಲ್ಲ. ತೆರೆದಿದ್ದ ಬಾಗಿಲು ಅದಕ್ಕೆ ಬಡಿದಿದೆ. ಇದು ಸಣ್ಣ ಅಪಘಾತ, ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಪಿತೂರಿ ಇಲ್ಲ. ಮಮತಾ ಬ್ಯಾನರ್ಜಿಯ ಬೆಂಗಾವಲಾಗಿ ಹಲವಾರು ಪೊಲೀಸ್ ವಾಹನಗಳು ಇದ್ದವು. ಭದ್ರತಾ ಸಿಬ್ಬಂದಿ ಹತ್ತಿರದ ಸಿಹಿ ಅಂಗಡಿಯಿಂದ ಐಸ್ ತಂದು ಸಿಎಂ ಗಾಯಗೊಂಡ ಕಾಲಿಗೆ ಇಟ್ಟಿದ್ದಾರೆ. ಬೆಂಗಾವಲು ಸುಮಾರು 5 ನಿಮಿಷಗಳ ಕಾಲ ನಿಂತುಹೋಯಿತು, ನಂತರ ಅದು ಮುಂದೆ ಸಾಗಿತು'' ಎಂದು ಅವರು ಮಾಹಿತಿ ನೀಡಿದರು.