ಬೆಂಗಳೂರು, ಮಾ.11 (DaijiworldNews/MB) : ''ಹಣಕಾಸು ಖಾತೆಯನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಬಿಟ್ಟುಕೊಡಬೇಕು. ಆ ಖಾತೆಯ ನಿರ್ವಹಣೆ ಮಾಡಬೇಕಾದರೆ ಉತ್ತಮ ಜ್ಞಾನ ಮುಖ್ಯ'' ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಎಚ್ ವಿಶ್ವನಾಥ್ ಹೇಳಿದ್ದಾರೆ.
ಬುಧವಾರ ವಿಧಾನಪರಿಷತ್ನಲ್ಲಿ ಚರ್ಚೆ ಸಂದರ್ಭ ಮಾತನಾಡಿದ ಅವರು, ''ಮುಖ್ಯಮಂತ್ರಿಗಳು ಹಣಕಾಸು ಸೇರಿ ಹಲವು ಖಾತೆ ಹೊಂದಿರುವುದನ್ನು ಖಂಡಿಸಿದರು. ಹಣಕಾಸು ಖಾತೆ ನಿರ್ವಹಣೆಗೆ ಅಧಿಕ ಜ್ಞಾನ ಮುಖ್ಯ. ನೀವು ಹಣಕಾಸು ತಜ್ಞರಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಬಿಎಸ್ವೈ ಮಂಡನೆ ಮಾಡಿದ ಬಜೆಟ್ ಸರಿಯಾಗಿಲ್ಲ. ಹೊರಗಿನ ಜ್ಞಾನ, ಅನುಭವ ಹೊಂದಿರುವವರು ಈ ಹಣಕಾಸು ಖಾತೆ ನಿರ್ವಹಣೆ ಮಾಡಬೇಕು'' ಎಂದು ಅಭಿಪ್ರಾಯಿಸಿದ್ದಾರೆ.
''ಹಣಕಾಸಿಗೆ ಪ್ರತಿದಿನದ ಅಧ್ಯಯನ ಮುಖ್ಯ. ಹಾಗಾದರೆ ಮಾತ್ರ ಹಣಕಾಸಿನ ಶಿಸ್ತು ಬರುತ್ತದೆ. ಈ ವಿಚಾರದಲ್ಲಿ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಮಧ್ಯೆ ನನಗೆ ಜಗಳವಾಗಿತ್ತು. ರಾಜ್ಯಕ್ಕೆ ಪ್ರತ್ಯೇಕ ಹಣಕಾಸು ಸಚಿವರು ಅತೀ ಮುಖ್ಯ ಎಂದು ನಾನು ಹೇಳಿದ್ದೆ. ಅದಕ್ಕೆ ಅವರು ನನ್ನ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲವೇ ಎಂದಿದ್ದರು. ಆದರೆ ಇದರು ಸಾಮರ್ಥ್ಯದ ವಿಷಯವಲ್ಲ. ಸಿಎಂಗಳು ಬೇರೆ ಕೆಲಸದ ಒತ್ತಡದಲ್ಲಿ ಇರುವಾಗ ಈ ಖಾತೆಯನ್ನು ಕೂಡಾ ನಿರ್ವಹಿಸುವುದು ಕಷ್ಟ'' ಎಂದು ಹೇಳಿದರು.
''ಇದೇ ವೇಳೆ ವಿಧಾನಸೌಧ ಬ್ರೋಕರ್ ಗಳಿಗೆ ಸ್ವರ್ಗದಂತಾಗಿದೆ'' ಎಂದು ದೂರಿದ ಅವರಿ, ''ಬ್ರೋಕರ್ಗಳಿಗೆ ವಿಧಾನ ಸೌಧ ಮಾಲ್ ಇದ್ದಂತಾಗಿದ್ದು ಬಂದು ಹೋಗುತ್ತಲಿರುತ್ತಾರೆ. ಆದ್ದರಿಂದ ವಿಧಾನಸೌಧದಿಂದ ಹೊರಹೋಗುವ ಗೇಟ್ ಗಳನ್ನು ಮಧ್ಯಾಹ್ನ ನಂತರ ಬಂದ್ ಮಾಡಬೇಕು. ಸೌಧಕ್ಕೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಬೇಕು'' ಎಂದು ಒತ್ತಾಯಿಸಿದರು.