ಬೆಂಗಳೂರು, ಮಾ.11 (DaijiworldNews/PY): "ದ.ಕ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿಂದಿನ ಸಂಪ್ರದಾಯದಂತೆಯೇ ಮಹಾಶಿವರಾತ್ರಿ ಹಬ್ಬ ಆಚರಣೆ ಮಾಡಿ" ಎಂದು ಹೈಕೋರ್ಟ್ ದೇವಾಲಯದ ಆಡಳಿತ ಮಂಡಳಿಗೆ ನಿರ್ದೇಶನ ನೀಡಿದೆ.
ಮಹಾಶಿವರಾತ್ರಿ ಹಬ್ಬವನ್ನು ಶೈವ ಪದ್ದತಿಯ ಅನುಸಾರ ಆಚರಿಸಲು ಅವಕಾಶ ನೀಡುವಂತೆ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ ದೇವಸ್ಥಾನದ ಭಕ್ತರಾದ ಬಿ.ಆರ್.ಮುರಳೀಧರನ್, ವಿಜಯಸಿಂಹ ಹಾಗೂ ಇತರರು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠವು ಅರ್ಜಿಯ ವಿಚಾರಣೆ ನಡೆಸಿದ್ದು, "ದೇವಸ್ಥಾನದಲ್ಲಿ ಈ ಹಿಂದೆ ಯಾವ ಪದ್ಧತಿಯನ್ನು ಅನುಸರಿಸಿಕೊಂಡು ಬರಲಾಗುತ್ತಿತ್ತೋ ಆ ಪದ್ದತಿಯ ಅನುಸಾರವಾಗಿ ಮಹಾಶಿವರಾತ್ರಿ ಆಚರಣೆ ಮಾಡಿ. ಹೊಸ ಪದ್ದತಿಯನ್ನು ಅನುಸರಿಸುವುದು ಬೇಡ" ಎಂದು ತಿಳಿಸಿದೆ.
"ಪೂಜಾ ವಿಧಿ-ವಿಧಾನಗಳನ್ನು ಶತಮಾನಗಳಿಂದ ವೈಷ್ಣವ ಸಂಪ್ರದಾಯದಂತೆ ನಡೆಸಲಾಗುತ್ತಿದೆ. ಈ ಬಾರಿಯ ಮಹಾಶಿವರಾತ್ರಿ ವೇಳೆ ರುದ್ರ ಪಾರಾಯಣ ಸೇರಿದಂತೆ ಬಿಲ್ವಾರ್ಚನೆ, ರುದ್ರ ಹೋಮ ಶೈವ ಸಂಪ್ರದಾಯದಂತೆ ಹೊಸ ಆಚರಣೆಗಳಿಗೆ ಅವಕಾಶ ನೀಡಿ ಮಾರ್ಚ್ 3ರಂದು ಆದೇಶ ಹೊರಡಿಸಲಾಗಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿ ಕಾಯ್ದೆಯ ಉಲ್ಲಂಘನೆಯಾಗಿದೆ" ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.
ಪೀಠವು ಮಧ್ಯಂತರ ಆದೇಶ ನೀಡಿದ್ದು, ಅರ್ಜಿಯ ಸಂಬಂಧ ಸರ್ಕಾರ ಹಾಗೂ ಹಿಂದೂ ಧಾರ್ಮಿಕ ಹಾಗೂ ದತ್ತಿ ಇಲಾಖೆಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.