ಬೆಂಗಳೂರು, ಮಾ.11 (DaijiworldNews/MB) : ಜೊಮ್ಯಾಟೊ ಮೊಬೈಲ್ ಆ್ಯಪ್ ಮೂಲಕ ಡೆಲಿವರಿಗೆ ಬುಕ್ ಮಾಡಿ ಆಹಾರ ಪೂರೈಕೆ ಮಾಡುವಾಗ ತಡವಾದ ಕಾರಣ ಡೆಲಿವರಿ ಬಾಯ್ ಹಾಗೂ ಗ್ರಾಹಕಿ ಜೊತೆಗೆ ವಾಗ್ವಾದ ಉಂಟಾಗಿದ್ದು ತೀವ್ರ ಆಕ್ರೋಶಕ್ಕೆ ಒಳಗಾದ ಡೆಲಿವರಿ ಬಾಯ್ ಗ್ರಾಹಕಿಯ ಮುಖಕ್ಕೆ ಪಂಚ್ ಹೊಡೆದಿದ್ದಾನೆ. ಇದೇ ಕಾರಣಕ್ಕೆ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರಸಾದನ ಕಲಾವಿದೆ ಆಗಿರುವ ಇಂದ್ರಾಣಿ, ಎಂಬವರು ಜೊಮ್ಯಾಟೊ ಆ್ಯಪ್ ಮೂಲಕ ಮಧ್ಯಾಹ್ನ 3.30ಕ್ಕೆ ಊಟ ಆರ್ಡರ್ ಮಾಡಿದ್ದು ಆರ್ಡರ್ ಮಾಡಿ ಗಂಟೆ ಕಳೆದರೂ ಆಹಾರ ಬರದ ಕಾರಣ ಆರ್ಡರ್ ರದ್ದು ಮಾಡಿದ್ದರು. ಆರ್ಡರ್ ರದ್ದಾದ ಕೆಲವು ನಿಮಿಷಗಳಲ್ಲಿ ಆರ್ಡರ್ ಬಾಯ್ ಕಾಮರಾಜ್, ತನ್ನ ಬಳಿಯ ಆಹಾರ ಕೊಟ್ಟಿದ್ದ. ಈ ವೇಳೆ ಆಹಾರ ಡೆಲವರಿ ತಡವಾದ ಕಾರಣ ಇಂದ್ರಾಣಿ ಆರ್ಡರ್ ರದ್ದು ಮಾಡಲು ಯುವತಿ ಹೇಳಿ ವಾಪಾಸ್ ಹೋಗಲು ಸೂಚಿಸಿದ್ದರು. ಇದೇ ವಿಚಾರಕ್ಕೆ ಕಾಮರಾಜ್ ಜಗಳ ಮಾಡಿದ್ದು, ನಾನು ನಿಮ್ಮ ಮನೆ ಗುಲಾಮನಲ್ಲ ಎಂದು ಕೂಗಾಡಿ ಯುವತಿಗೆ ಪಂಚ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾನೆ.
ಡೆಲವರಿ ಬಾಯ್ ಪಂಚ್ಗೆ ಯುವತಿಯ ಮೂಗಿನಿಂದ ರಕ್ತ ಸೋರಲು ಆರಂಭಿಸಿದ್ದು ಯುವತಿಗೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬ್ಯಾಂಡೇಜ್ ಹಾಕಿಸಿಕೊಂಡು ನಂತರ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಸ್ಥಳೀಯ ನಿವಾಸಿಯೇ ಆಗಿರುವ ಡೆಲಿವರಿ ಬಾಯ್ ಕಾಮರಾಜ್ (28) ಎಂಬಾತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಆಹಾರ ನೀಡಲು ಬಂದ ಡೆಲಿವರಿ ಬಾಯ್ ಕಾಮರಾಜ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಇಂದ್ರಾಣಿ ದೂರು ನೀಡಿದ್ದಾರೆ. ಹಾಗೆಯೇ ಈ ಬಗ್ಗೆ ತನ್ನ ಇನ್ಸ್ಟಾಗ್ರಾಂ ಮೂಲಕ ವಿಡಿಯೋ ಹರಿಬಿಟ್ಟಿದ್ದಾರೆ.