ಬೆಂಗಳೂರು, ಮಾ. 10 (DaijiworldNews/SM): ಮದುವೆಗಳು ಮತ್ತು ಇತರ ಸಮಾರಂಭಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಈ ಸಂಬಂಧ ಈಗಾಗಲೇ ಮಾರ್ಗಸೂಚಿ ಜಾರಿಗೊಳಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಸೋಂಕು ಹರಡದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹೋಟೆಲ್ಗಳು ಮತ್ತು ಮದುವೆ ಸಭಾಂಗಣಗಳಿಗೆ ಸೂಚನೆಗಳನ್ನು ರವಾನಿಸಲಾಗಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ನೀಡಲಾಗಿದೆ.
"ನಾವು ತಡರಾತ್ರಿಯ ಪಾರ್ಟಿಗಳನ್ನು ನಿಷೇಧಿಸಿದ್ದೇವೆ, ಏಕೆಂದರೆ ಆ ಸಮಯದಲ್ಲಿ ಹೆಚ್ಚಿನ ಜನರು ಸೇರುತ್ತಾರೆ. ನೆರೆಯ ರಾಜ್ಯಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ಅದನ್ನು ಇಲ್ಲಿ ಹರಡದಂತೆ ತಡೆಯಲು ನಾವು ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದೇವೆ," ಎಂದು ಅವರು ಹೇಳಿದರು.
ರಾಜ್ಯಾದ್ಯಂತ 3,500 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ, ನಾವು ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಿದ್ದೇವೆ ಎಂದು ಸಚಿವರು ಹೇಳಿದರು.