ಕೋಲ್ಕತ್ತಾ, ಮಾ.10 (DaijiworldNews/PY): ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯವರು, ನಾನೊಬ್ಬ ಹಿಂದೂ ಎಂದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದು, "ದೇವಸ್ಥಾನಕ್ಕೆ ಯಾರು ಶೂ ಧರಿಸಿ ಹೋಗುತ್ತಿದ್ದರೋ ಅಂತವರೇ ಇಂದು ನಾನು ಹಿಂದೂ ಎಂದು ಏಕೆ ಹೇಳಿಕೊಳ್ಳುತ್ತಿದ್ದಾರೆ?" ಎಂದು ಕೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರ ವಿರುದ್ದ ವಾಗ್ದಾಳಿ ನಡೆಸಿರುವ ಸುವೇಂದು, "ಮಮತಾ ಬ್ಯಾನರ್ಜಿ ಅವರು ಇದೀಗ ಇನ್ಶಾಲ್ಲಾ ಎಂದು ಹೇಳುವುದನ್ನು ನಿಲ್ಲಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಜನ್ಮ ದಿನಾಚರಣೆಯಲ್ಲಿ ಜೈಶ್ರೀರಾಮ್ ಘೋಷಣೆ ಕೂಗುವುದು ಅಪರಾಧ ಎಂದು ಹೇಳಿದ್ದರು. ದೇವಸ್ಥಾನಕ್ಕೆ ಯಾರು ಶೂ ಧರಿಸಿ ಹೋಗುತ್ತಿದ್ದರೋ ಅಂತವರೇ ಇಂದು ನಾನು ಹಿಂದೂ ಎಂದು ಏಕೆ ಹೇಳಿಕೊಳ್ಳುತ್ತಿದ್ದಾರೆ?" ಎಂದು ಕೇಳಿದ್ದಾರೆ.
"ಮಮತಾ ಬ್ಯಾನರ್ಜಿ ಅವರು ಹೇಳಿದ ಮಂತ್ರಗಳನ್ನು ಸರಿಪಡಿಸಲು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸುತ್ತೇವೆ. ಈ ಮಂತ್ರಗಳನ್ನು ಅವರು ಸರಿಪಡಿಸಲಿದ್ದಾರೆ" ಎಂದಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಮಂಗಳವಾರ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ದುರ್ಗಾದೇವಿಯ ಮಂತ್ರವನ್ನು ಪಠಿಸಿ ತಾವು ಓರ್ವ ಹಿಂದೂ ಎಂದು ಘೋಷಣೆ ಮಾಡಿದ್ದರು. "ಹಿಂದುತ್ವದ ಬಗ್ಗೆ ನನಗೆ ನೀವು ಹೇಳಿಕೊಡುವುದಕ್ಕೆ ಬರಬೇಡಿ. ನನಗೆ ಎಲ್ಲಾ ಮಂತ್ರಗಳು ಬರುತ್ತವೆ ಎನ್ನುವುದನ್ನು ನಿಮಗೆ ನಾನು ತೋರಿಸಿಕೊಡುತ್ತೇನೆ" ಎಂದು ಬೂತ್ ಮಟ್ಟದ ಸಭೆಯ ಅಂತ್ಯಕ್ಕೂ ಮುನ್ನ ಮಂತ್ರ ಪಠಿಸಿದ್ದರು.
ಸಾರ್ವಜನಿಕ ಸಭೆಯಲ್ಲಿ ಸುವೇಂದು ಅಧಿಕಾರಿಯವರು ಮಮತಾ ಬ್ಯಾನರ್ಜಿ ಅವರು ಪಠಿಸಿದ ಮಂತ್ರದ ಸಾಲನ್ನು ಪ್ಲೇ ಮಾಡಿದ್ದು, ಮತ್ತೊಂದು ಕಡೆಯಲ್ಲಿ ಆ ಮಂತ್ರದ ನಿಜವಾದ ಆಡಿಯೋವನ್ನು ಪ್ಲೇ ಮಾಡಲಾಗಿತ್ತು. ಎರಡು ಆಡಿಯೋವನ್ನು ಹಾಕಿದ ಸುವೇಂದು ಅವರು, "ಮಮತಾ ಬ್ಯಾನರ್ಜಿ ಅವರು ಪಠಿಸಿದ ಮಂತ್ರ ತಪ್ಪು" ಎಂದು ಆರೋಪಿಸಿದ್ದಾರೆ.
ನಂದಿಗ್ರಾಮ್ ಕ್ಷೇತ್ರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಸುವೇಂದು ಅಧಿಕಾರಿ ಅವರ ವಿರುದ್ದ ಮಮತಾ ಬ್ಯಾನರ್ಜಿ ಅವರು ವಾಗ್ದಾಳಿ ನಡೆಸಿದ್ದರು. "ನಾನು ಹುಟ್ಟಿ ಬೆಳೆದಿದ್ದು ಬಿರ್ಭಮ್ ಜಿಲ್ಲೆಯಲ್ಲಿ. ನನ್ನನ್ನು ಹೊರಗಿನವನೆಂದು ಕರೆಯುವ ವ್ಯಕ್ತಿ ಸಹ ಇಲ್ಲಿ ಹುಟ್ಟಲಿಲ್ಲ. ಇಂದು ನಾನು ಹೊರಗಿನವಳಾಗಿದ್ದೇನೆ. ಗುಜರಾತ್ನಿಂದ ಬರುವವರು ಪಶ್ಚಿಮಬಂಗಾಳದಲ್ಲಿ ಒಳಗಿನವರಾಗಿದ್ದಾರೆ" ಎಂದು ಕಿಡಿಕಾರಿದ್ದರು.