ತಿರುವನಂತಪುರಂ, ಮಾ10 (DaijiworldNews/MS): ಕೇರಳದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಸಿಪಿಎಂ ಪಕ್ಷ 83 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಕ್ಷದ ರಾಜ್ಯ ಕಾರ್ಯದರ್ಶಿ ಎ ವಿಜಯರಾಘವನ್ ಅವರು ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಬಾರಿ ಹಣಕಾಸು ಸಚಿವ ಥಾಮಸ್ ಐಸಾಕ್ ಮತ್ತು ಕಾರ್ಮಿಕ ಸಚಿವ ಜಿ ಸುಧಾಕರನ್ ಸೇರಿದಂತೆ ಐವರು ಹಾಲಿ ಸಚಿವರು ಹಾಗೂ 33 ಹಾಲಿ ಶಾಸಕರ ಹೆಸರು ಈ ಪಟ್ಟಿಯಲ್ಲಿ ಸೇರಿಲ್ಲ.
ಈ ಪಟ್ಟಿಯಲ್ಲಿ 30 ವರ್ಷಕ್ಕಿಂತ ಕೆಳಗಿನ ನಾಲ್ಕು ಮಂದಿ ಒಳಗೊಂಡಿದ್ದಾರೆ. ಇನ್ನು ಸಿಪಿಎಂಗೆ ಬೆಂಬಲ ನೀಡಿದ್ದ ಒಂಬತ್ತು ಪಕ್ಷೇತರರು, ಬಂಡಾಯ ನಾಯಕ, ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಒಳಗೊಂಡ ಪಟ್ಟಿಯಲ್ಲಿ 11 ಮಂದಿ ಮಹಿಳಾ ಅಭ್ಯರ್ಥಿಗಳು ಇದ್ದಾರೆ. ಡಿವೈಎಫ್ಐ ರಾಷ್ಟ್ರೀಯ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ ಪಿಎ ಮೊಹಮ್ಮದ್ ರಿಯಾಸ್ ಅವರಿಗೆ ಬೆಪುರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಇನ್ನು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಧರ್ಮದಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.