ಬೆಂಗಳೂರು, ಮಾ.10 (DaijiworldNews/PY): "ನಮಗೆ ಸಿ.ಡಿ ಎಂದರೇನು ಅಂತಾನೆ ಗೊತ್ತಿಲ್ಲ" ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸೋಮವಾರದಂದು ಧರಣಿ ಕೂರಲು ನಾವು ತೀರ್ಮಾನ ಮಾಡಿದ್ದೇವೆ. ಎಲ್ಲರೂ ಸಭೆ ಮಾಡಿದ್ದೇವೆ. ಯಾವುದೇ ಪಕ್ಷದ ಕಾಮಗಾರಿ ಇರಲಿ. ಆದರೆ, ನಮಗೆ ಕಾಮಗಾರಿ ಮಾಡಿಸಿಕೊಡಬೇಕು" ಎಂದಿದ್ದಾರೆ.
"ಪ್ರಸ್ತುತ ರಾಜ್ಯದಲ್ಲಿ ಸಿ.ಡಿ ವಿಚಾರದ ಬಗ್ಗೆ ಚರ್ಚೆಯಾಗುತ್ತಿದೆ. ಸಿ.ಡಿ ಎಂದರೆ ಏನು ಎಂದು ನಮಗೆ ಗೊತ್ತಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಾಗಿದ್ದು, ನಮ್ಮನ್ನು ಕೇಳುವವರಿಲ್ಲ. ಇವರ ಮೇಲೆ ಅವರು ಹೇಳುತ್ತಾರೆ. ಅವರ ಮೇಲೆ ಇವರು ಹೇಳುತ್ತಾರೆ. ಇದೆಲ್ಲವನ್ನು ಜನರು ನೋಡುತ್ತಿದ್ದಾರೆ. ಈ ಮಧ್ಯೆ ನಾವೇನು ಹೇಳೊದು?" ಎಂದು ಕೇಳಿದ್ದಾರೆ.
ಸದನದಲ್ಲಿ ನಿನ್ನೆ ಸಿ.ಡಿ ಪ್ರದರ್ಶಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು, "ಓರ್ವ ಅಧಿಕಾರಿ ಪರಿಶಿಷ್ಟ ಜಾತಿ ಹುಡುಗನನ್ನು ಗುಂಡಿಕ್ಕೆ ಹತ್ಯೆ ಮಾಡುವುದಾಗಿ ಹೇಳಿದ್ದು, ಇನ್ನೊಂದು ಶಿವಲಿಂಗೇ ಗೌಡರನ್ನು ಅವಹೇಳನಕಾರಿಯಾಗಿ ಮಾತನಾಡಿರುವ ಬಗ್ಗೆ ಸಿ.ಡಿಯನ್ನು ಕೊಟ್ಟು ಅದನ್ನು ಸ್ಪೀಕರ್ನ ಗಮನಕ್ಕೆ ತಂದಿದ್ದೇವೆ. ಈ ಬಗ್ಗೆ ಅವರ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.