ಬೆಂಗಳೂರು, ಮಾ.10 (DaijiworldNews/MB) : ''ಇನ್ನೂ 23 ಸಿಡಿ ಇವೆಯಂತೆ, ಒಂದೊಂದೇ ಬಿಡುಗಡೆಯಾಗುತ್ತದೆ'' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ''ನಾನು ಬೇರೆಯೇ ಸಿಡಿ ಇದೆ ಎಂದು ಹೇಳಿದ್ದೆ. ಆದರೆ ಬೇರೆಯದ್ದೇ ಸಿಡಿ ಬಿಡುಗಡೆಯಾಗಿದೆ. ಇನ್ನೂ 23 ಸಿಡಿ ಇವೆಯಂತೆ, ಒಂದೊಂದೇ ಬಿಡುಗಡೆಯಾಗುತ್ತದೆ'' ಎಂದು ಹೇಳಿದ್ದಾರೆ.
''ಇಂತಹ ಸಿಡಿಗಳನ್ನೇ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುವ ಎರಡು ಪಕ್ಷಗಳಿವೆ. ಕೆಲ ರಾಜಕಾರಣಿಗಳು ಕೂಡಾ ಇದ್ದಾರೆ. ಎಲ್ಲಾ ಸಿಡಿಗಳು ಬಿಡುಗಡೆಯಾಗುತ್ತದೆ'' ಎಂದು ಪುನರುಚ್ಚರಿಸಿದ್ದಾರೆ.
''ನಾನು ಈ ಹಿಂದೆ ಸಿಡಿ ಬಿಡುಗಡೆಯಾಗಲಿದೆ, ಸತ್ಯದರ್ಶನವಾಗಲಿದೆ ಎಂದಿದ್ದೆ. ಈಗ ಹಾಗೆಯೇ ಎಲ್ಲವೂ ಆಗುತ್ತಿದೆ. ಆದರೆ ನನ್ನ ಬಳಿ ಯಾವ ಸಿಡಿಯೂ ಇಲ್ಲ'' ಎಂದು ಕೂಡಾ ಹೇಳಿದರು.
''ಈಗ ರಮೇಶ್ ಜಾರಕಿಹೊಳಿಯವರ ಸಿಡಿಯನ್ನು ಇವರು ಬಿಟ್ಟಿದ್ದಾರೆ. ಇನ್ನು ರಮೇಶ್ ಜಾರಕಿಹೊಳಿಯವರು ಸುಮ್ಮನಿರುತ್ತಾರಾ? ಅವರ ಬಳಿಯೂ ಸುಮಾರು ಸಿಡಿಗಳಿವೆ. ಅಪ್ಪ, ಮಕ್ಕಳ ಸಿಡಿಯೂ ಇದೆ. ಅವರು ಆ ಸಿಡಿಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತಾರೆ'' ಎಂದೂ ಹೇಳಿದರು.