ಮುಂಬೈ, ಮಾ.10 (DaijiworldNews/PY): "ಮುಂಬೈ ಪೊಲೀಸರು, ಲೋಕಸಭಾ ಸದಸ್ಯ ಮೋಹನ್ ದೇಲ್ಕರ್ (58) ಅವರ ಸಾವಿಗೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದಿಸಿದ ಆರೋಪದ ಮೇಲೆ ಕೆಲವರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ" ಎಂದು ಮುಂಬೈನ ಹಿರಿಯ ಪೊಲೀಸ್ ಅಧಿಕಾರಿ ಬುಧವಾರ ಹೇಳಿದ್ದಾರೆ.
ದೇಲ್ಕರ್ ಅವರು ದಾದ್ರಾ ಹಾಗೂ ನಗರ ಹವೇಲಿ ಕೇಂದ್ರಾಡಳಿತ ಪ್ರದೇಶದಲ್ಲಿ ಏಳು ಬಾರಿ ಸಂಸದರಾಗಿದ್ದರು. ಫೆ.22ರಂದು ಅವರು ದಕ್ಷಿಣ ಮುಂಬೈನ ಮೆರೈನ್ ಡ್ರೈವ್ ಹೋಟೆಲ್ನಲ್ಲಿ ಶವವಾಗಿ ಪತ್ತೆಯಾಗಿದ್ದರು.
"ಘಟನೆಯ ಬಗ್ಗೆ ದೇಲ್ಕರ್ ಅವರ ಕುಟುಂಬದ ಸದಸ್ಯರು ಮೆರೈನ್ ಡ್ರೈವ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಬಳಿಕ ಮಂಗಳವಾರ ಮಂಗಳವಾರ ಎಫ್ಐಆರ್ ದಾಖಲಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ಸೇರಿದಂತೆ ದೌರ್ಜನ್ಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ" ಎಂದು ಅಧಿಕಾರಿ ಹೇಳಿದ್ದಾರೆ.
"ಮೋಹನ್ ದೇಲ್ಕರ್ ಅವರ ಮೃತದೇಹ ದೊರೆತ ಕೊಠಡಿಯಲ್ಲಿ ದೊರೆತ ಅವರದ್ದೇ ಹೆಸರಿನ ಲೆಟರ್ಹೆಡ್ನಲ್ಲಿ ಬರೆದಿರುವ 15 ಪುಟಗಳ ಡೆತ್ ನೋಟ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು" ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
"ವಿಶೇಷ ತನಿಖಾ ತಂಡಕ್ಕೆ ಪ್ರಕರಣದ ತನಿಖೆಯನ್ನು ವಹಿಸಲಾಗಿದೆ" ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಪ್ರಕಟಿಸಿದ್ದಾರೆ.