ಕಾನ್ಪುರ, ಮಾ.10 (DaijiworldNews/MB) : ಉತ್ತರ ಪ್ರದೇಶದಲ್ಲಿ ಮತ್ತೊಂದು ಉನ್ನಾವೋ ಮಾದರಿ ಘಟನೆ ನಡೆದಿದೆ. ಅತ್ಯಾಚಾರಕ್ಕೊಳಗಾಗಿದ್ದ 13 ವರ್ಷದ ಬಾಲಕಿಯ ತಂದೆ ರಸ್ತೆ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದಾರೆ. ಉನ್ನಾವೋ ಅತ್ಯಾಚಾರ ಪ್ರಕರಣದಲ್ಲೂ ಸಂತ್ರಸ್ತೆಯ ತಂದೆ ಹಾಗೂ ಸಂಬಂಧಿಕರು ಅಪಘಾತದವೊಂದರಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಶಾಸಕ ಮುಖ್ಯ ಆರೋಪಿಯಾಗಿದ್ದ.
ಮೂರು ಮಂದಿ ಆರೋಪಿಗಳು ಎರಡು ದಿನಗಳ ಹಿಂದೆ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ. ಸಂತ್ರಸ್ತೆ ವೈದ್ಯಕೀಯ ಪರೀಕ್ಷೆಗೆಂದು ದಾಖಲಿಸಲಾಗಿದೆ. ಈ ಆಸ್ಪತ್ರೆಯ ಹೊರಗಡೆಯೇ ಸಂತ್ರಸ್ತೆಯ ತಂದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಸಂತ್ರಸ್ತೆಯ ತಂದೆ ಮಂಗಳವಾರ ಬಾಲಕಿಯ ವೈದ್ಯಕೀಯ ತಪಾಸಣೆ ನಡೆಯುತ್ತಿದ್ದ ವೇಳೆ ಚಹಾ ಕುಡಿಯಲೆಂದು ಆಸ್ಪತ್ರೆಯಿಂದ ಹೊರಗೆ ಹೋಗಿದ್ದು ಈ ವೇಳೆ ಟ್ರಕ್ ಒಂದು ಅವರ ಮೇಲೆ ಎರಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆಯೇ ಅವರು ಸಾವನ್ನಪ್ಪಿದ್ದಾರೆ.
ಇನ್ನು ಈ ಅತ್ಯಾಚಾರ ಪ್ರಕರಣದ ಮುಖ್ಯ ಆರೋಪಿ ಗೋಲು ಯಾದವ್ ಎಂಬಾತನ ತಂದೆ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಅತ್ಯಚಾರದ ಬಗ್ಗೆ ದೂರು ದಾಖಲಿಸಿದ ಬಳಿಕ ಸಂತ್ರಸ್ತೆಯ ತಂದೆಗೆ ಬೆದರಿಕೆ ಕರೆಗಳು ಬರಲು ಆರಂಭಿಸಿದೆ ಎಂದು ಹೇಳಲಾಗಿದೆ. ಪ್ರಕರಣದ, ''ಪ್ರಮುಖ ಆರೋಪಿಯ ಅಣ್ಣ ಸಂತ್ರಸ್ತೆಯ ತಂದೆಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ನನ್ನ ತಂದೆ ಪೊಲೀಸ್ ಇನ್ಸ್ಪೆಕ್ಟರ್ ನೆನಪಿರಲಿ ಎಂದು ಎಚ್ಚರಿಕೆ ನೀಡಿದ್ದ'' ಎಂದು ಆರೋಪಿಸಿದರುವ ಕುಟುಂಬವು, ''ಈ ಕೊಲೆಯನ್ನು ಆರೋಪಿಯ ತಂದೆಯೇ ಮಾಡಿಸಿದ್ದಾರೆ'' ಎಂದು ದೂರಿದ್ದಾರೆ.
ಈ ಘಟನೆಯ ಬಗ್ಗೆಯೂ ಪೊಲೀಸರು ಪ್ರಕರಣ ದಾಖಲಿಸಿದ್ದು ತನಿಖೆ ಆರಂಭ ಮಾಡಿದ್ದಾರೆ. ಸಂತ್ರಸ್ತೆಯ ತಂದೆಗೆ ಡಿಕ್ಕಿ ಹೊಡೆದ ಟ್ರಕ್ ಅನ್ನು ವಶಕ್ಕೆ ಪಡೆದಿರುವ ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿದ್ದಾರೆ.
ಇನ್ನು ಈ ಘಟನೆಯಲ್ಲಿ ಆರೋಪಿಗಳಿಗೆ ಶಿಕ್ಷೆ ನೀಡಲಾಗುವುದು. ಸದ್ಯ ಸಂತ್ರಸ್ತೆ ಆರೋಗ್ಯವಾಗಿದ್ದಾರೆ. ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.