ಬೆಂಗಳೂರು, ಮಾ.10 (DaijiworldNews/PY): ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಿಡುಗಡೆ ಮಾಡಿದ್ದೇ ಕಾಂಗ್ರೆಸ್ ಎಂದು ಆರೋಪ ಮಾಡಿದ್ದ ಸಚಿವ ಎಸ್.ಟಿ. ಸೋಮಶೇಖರ್ಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, "ಸಿಡಿ ಮಾಡಿದ್ದು ಕಾಂಗ್ರೆಸ್ನವರೇ, ನಾನೂ ಕಾಂಗ್ರೆಸ್ನಲ್ಲಿದ್ದವನೇ ಎಂದಿರುವ ಸಚಿವ ಎಸ್ ಟಿ ಸೋಮಶೇಖರ್ ಅವರೇ. ನೀವೆಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ? ಅದಕ್ಕೆಷ್ಟು ಖರ್ಚು ಮಾಡಿದ್ದೀರಿ?" ಎಂದು ಪ್ರಶ್ನಿಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್, "ಸಿಡಿ ಮಾಡಿದ್ದು ಕಾಂಗ್ರೆಸ್ನವರೇ, ನಾನೂ ಕಾಂಗ್ರೆಸ್ನಲ್ಲಿದ್ದವನೇ ಎಂದಿರುವ ಸಚಿವ ಎಸ್ ಟಿ ಸೋಮಶೇಖರ್ ಅವರೇ. ನೀವೆಷ್ಟು ಸಿಡಿ ಮಾಡಿದ್ದೀರಿ? ನಿಮ್ಮದೆಷ್ಟು ಸಿಡಿ ಇದೆ? ಅದಕ್ಕೆಷ್ಟು ಖರ್ಚು ಮಾಡಿದ್ದೀರಿ? ಬಾಂಬೆಯ ಹೋಟೆಲ್ನಲ್ಲಿ ಕ್ವಾರೆಂಟೈನ್ ಆಗಿದ್ದಿರಲ್ಲ ಆಗ ನಿಮ್ಮ ಸಿಡಿ ಯಾರು ಮಾಡಿದ್ದು? ಕೋರ್ಟಿಗೆ ಅರ್ಜಿ ಏಕೆ ಸಲ್ಲಿಸಿದಿರಿ?" ಎಂದು ಪ್ರಶ್ನಿಸಿದೆ.
"ಕಾಂಗ್ರೆಸ್ ಮೇಲೆ ಆರೋಪಿಸುವ ಸೋಮಶೇಖರ್ ಅವರೇ ನಿಮ್ಮ ಕಳ್ಳ ಮನಸೇಕೆ ಹುಳ್ಳುಳ್ಳಗೆ ಆಡುತ್ತಿದೆ? ಹೆಗಲು ಮುಟ್ಟಿ ನೋಡಿಕೊಂಡವರಂತೆ ಓಡಿ ಹೋಗಿ ತಡೆಯಾಜ್ಞೆ ಅರ್ಜಿ ಏಕೆ ಸಲ್ಲಿಸಿದಿರಿ?" ಎಂದು ಕೇಳಿದೆ.
"ಮನೆಹಾಳು ಕೆಲಸ ಯಾರು ಮಾಡುವವರು ಎನ್ನುವುದನ್ನು ಬಸನಗೌಡಪಾಟೀಲ್ ಯತ್ನಾಳ್ ಅವರಲ್ಲಿ ವಿಚಾರಿಸಿ, ಹೇಳುತ್ತಾರೆ. ಬಿ.ವೈ ವಿಜಯೇಂದ್ರ ಅವರು ಸಿಡಿ ತಯಾರಿಕಾ ಘಟಕವನ್ನು ಹೊಂದಿರುವ ಬಗ್ಗೆ ಗಂಟಾಘೋಷವಾಗಿ ಹೇಳಿದ್ದಾರೆ. ಬ್ಲಾಕ್ಮೇಲ್ ಜನತಾ ಪಾರ್ಟಿ ಎಂದು ನಿಮ್ಮವರೇ ಸಾರಿ ಸಾರಿ ಹೇಳಿದ್ದಾರೆ" ಎಂದು ಹೇಳಿದೆ.
ಸಿ.ಡಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಎಸ್ ಟಿ ಸೋಮಶೇಖರ್ ಅವರು, "ನಮ್ಮ ಸಿ.ಡಿ ಬರುತ್ತದೆ ಎಂದು ನಾವು ಕೋರ್ಟ್ಗೆ ಹೋಗಿಲ್ಲ. ಡ್ಯಾಮೇಜ್ ತಡೆಯುವ ಸಲುವಾಗಿ ಕೋರ್ಟ್ಗೆ ಹೋಗಿದ್ದು. ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಿಡುಗಡೆ ಮಾಡಿದ್ದೇ ಕಾಂಗ್ರೆಸ್. ಈ ರೀತಿಯಾದ ಮನೆಹಾಳು ಕೆಲಸ ಅವರು ಮಾಡದೇ ಇನ್ಯಾರು ಮಾಡುತ್ತಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
"ಕಾಂಗ್ರೆಸ್ನಲ್ಲಿ ನಾನು 20 ವರ್ಷ ಇದ್ದೆ. ಕಾಂಗ್ರೆಸಿಗರು ಏನೇನು ಮಾಡುತ್ತಾರೆ ಎಂದು ನನಗೆ ತಿಳಿದಿದೆ. ಸಿಬಿಐ ತನಿಖೆಗೆ ನೀಡಿದರೆ ಎಲ್ಲಾ ವಿಚಾರ ಆಚೆಗೆ ಬರುತ್ತದೆ" ಎಂದಿದ್ದರು.
"ಕಾಂಗ್ರೆಸಿಗರು ರಾಜಕೀಯವಾಗಿ ಸವಾಲು ಹಾಕಿದರೆ ಎದುರಿಸುತ್ತೇವೆ. ತಾಕತ್ತಿದ್ದರೆ ನನ್ನ ವಿರುದ್ದ ಸ್ಪರ್ಧಿಸಲಿ. ರಮೇಶ್ ಜಾರಕಿಹೊಳಿ ಅವರ ವಿರುದ್ದ ಸ್ಪರ್ಧಿಸಲಿ. ಇದೆಲ್ಲಾ ಬಿಟ್ಟು ಸಿ.ಡಿ ರಾಜಕಾರಣ ಮಾಡುವುದು ಸೂಕ್ತವಲ್ಲ" ಎಂದು ಕೈ ನಾಯಕರಿಗೆ ಸವಾಲ್ ಹಾಕಿದ್ದರು.