ನವದೆಹಲಿ, ಮಾ.10 (DaijiworldNews/MB) : ಕಳೆದ ಜನವರಿ 26ರಂದು ಗಣರಾಜ್ಯೋತ್ಸವ ದಿನ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ದೆಹಲಿ ಪೊಲೀಸ್ ಅಪರಾಧ ವಿಭಾಗವು ಇಬ್ಬರನ್ನು ಬಂಧನ ಮಾಡಿದೆ.
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿದ್ದರು. ಈ ಸಂದರ್ಭ ಭಾರೀ ಹಿಂಸಾಚಾರ ನಡೆದಿತ್ತು. ಒಂದು ಗುಂಪು ಕೆಂಪುಕೋಟೆಯತ್ತ ತೆರಳಿ ಕೆಂಪುಕೋಟೆಯ ಆವರಣದಲ್ಲಿ ಬೇರೊಂದು ಧ್ವಜವನ್ನು ಹಾರಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ಡಚ್ ಪ್ರಜೆ ಪ್ರಸ್ತುತ ಇಂಗ್ಲೆಂಡ್ ನ ಬಿರ್ಮಿಂಗ್ ಹ್ಯಾಂನಲ್ಲಿ ನೆಲೆಸಿರುವ ಮಣಿಂದರ್ ಜಿತ್ ಸಿಂಗ್ ಮತ್ತು ಕೆಂಪ್ರೀತ್ ಸಿಂಗ್ರನ್ನು ಪೊಲೀಸರು ಬಂಧಿಸಿರುವುದಾಗಿ ದೆಹಲಿ ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ.
ಇನ್ನು ಈ ಹಿಂಸಾಚಾರಕ್ಕೆ ಪ್ರಚೋಧನೆ ನೀಡಿದ ಆರೋಪದಲ್ಲಿ ಈಗಾಗಲೇ ಪಂಜಾಬಿ ನಟ ದೀಪ್ ಸಿಧುವನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ ಇತರ ಆರೋಪಿಗಳನ್ನು ಬಂಧಿಸಿದ್ದಾರೆ.