ನವದೆಹಲಿ, ಮಾ.10 (DaijiworldNews/MB) : ಇಂಧನ ಬೆಲೆ ಏರಿಕೆ ವಿಚಾರವಾಗಿ ಲೋಕಸಭೆಯಲ್ಲಿ ಚರ್ಚಿಸಲು ಅವಕಾಶ ನೀಡದ ಕಾರಣ ಸದನದಲ್ಲಿ ಗದ್ದಲ ಉಂಟಾಗಿದ್ದು ಪ್ರತಿಪಕ್ಷಗಳ ಸದಸ್ಯರು ಕೃಷಿ ಕಾಯ್ದೆಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ಕಲಾಪ ಆರಂಭಕ್ಕೂ ಮುನ್ನವೇ ರೈತರ ಪ್ರತಿಭಟನೆ ಮತ್ತು ಕೃಷಿ ಕಾಯ್ದೆ ಬಗ್ಗೆ ನಾವು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.
ಏತನ್ಮಧ್ಯೆ ಲೋಕಸಭೆಯಲ್ಲಿ ಇಂಧನ ಬೆಲೆ ಏರಿಕೆ ವಿಚಾರವಾಗಿ ಮಾತನಾಡಲು ಅವಕಾಶ ನೀಡದ ಕಾರಣ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದೆ. ಕೂಡಲೇ ಇಂಧನ ದರ ಏರಿಕೆ ಬಗ್ಗೆ ಚರ್ಚೆ ನಡೆಯಬೇಕು. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಮಹಾರಾಷ್ಟ್ರ ಸರ್ಕಾರವು ಬುಲೆಟ್ ರೈಲು ಯೋಜನೆ ಸ್ಥಗಿತಗೊಳಿಸಿರುವ ವಿಚಾರ ಕಲಾಪದಲ್ಲಿ ಚರ್ಚೆಯಾಗಿದೆ. ಆದರೆ ಕಲಾಪದಲ್ಲಿ ಇಂಧನ ಬೆಲೆ ಏರಿಕೆ ವಿಚಾರ ಚರ್ಚೆಗೆ ಅವಕಾಶ ನೀಡದ ಕಾರಣ ಎದ್ದ ಗದ್ದಲದಿಂದಾಗಿ ಕಲಾಪವನ್ನು ಮತ್ತೆ ಮುಂದೂಡಲಾಗಿದೆ.