ಬೆಂಗಳೂರು, ಮಾ.10 (DaijiworldNews/PY): ಕಾಂಗ್ರೆಸ್ನ ಹಲವು ಜನರು ಬಿಜೆಪಿಯ ಕದ ತಟ್ಟುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕಾಂಗ್ರೆಸ್ ಸವಾಲ್ ಹಾಕಿದ್ದು, "ಬಿಜೆಪಿ ಬ್ಲ್ಯೂ ಬ್ಯಾಯ್ಸ್ಗಳ ಉಚ್ಛಾಟಿಸಿ, ನಿಮ್ಮ ಬೆನ್ನುಮೂಳೆಯ ಗಟ್ಟಿತನ ತೋರಿಸಿ" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕಾಮಿಡಿ ಕಿಂಗ್ ನಳಿನ್ ಕುಮಾರ್ ಕಟೀಲ್ ಅವರೇ, ಒಬ್ಬರ ಸಿಡಿ ಹೊರಬಂದಿದೆ. 6 ಜನ ಗೋಳಾಡಿಕೊಂಡು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 13 ಜನ ಅರ್ಜಿ ಸಲ್ಲಿಸಲು ಕಾದಿದ್ದಾರೆ. ನಿಮ್ಮ ಮನೆಯೇ ಸಿಡಿ ಸುನಾಮಿಗೆ ಸಿಡಿದು ಹೋಗಿದೆ! ಬಿಜೆಪಿ ಬಾಯ್ಸ್ಗಳ ರಾಜೀನಾಮೆ ಪಡೆದು, ಉಚ್ಛಾಟಿಸಿ ನಿಮ್ಮ ಬೆನ್ನು ಮೂಳೆಯ ಗಟ್ಟಿತನ ಹಾಗೂ ನಿಮ್ಮ ಪಕ್ಷದ ನೈತಿಕತೆ ಪ್ರದರ್ಶಿಸಿ" ಎಂದು ಸವಾಲ್ ಹಾಕಿದೆ.
"ಕಾಂಗ್ರೆಸ್ನ ಹಲವು ಜನರು ಬಿಜೆಪಿಯ ಕದ ತಟ್ಟುತ್ತಿದ್ದಾರೆ. ಬಾಗಿಲು ತೆರೆಯಬೇಕೆ ಅಥವಾ ಬೇಡವೇ ಎಂದು ನಾವು ಇನ್ನೂ ನಿರ್ಧರಿಸಬೇಕಾಗಿಲ್ಲ. ಕಾಂಗ್ರೆಸ್ ಖಾಲಿಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಸಂಘರ್ಷದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಆದ್ದರಿಂದ, ಪಕ್ಷದ ಕಾರ್ಯಕರ್ತರು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪಕ್ಷಕ್ಕೆ ಸೇರಲು ಯೋಚಿಸುತ್ತಿದ್ದಾರೆ" ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು.