ಡೆಹರಡೂನ್, ಮಾ10 (DaijiworldNews/MS): ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಲೋಕ ಸಭಾ ಸಂಸದ ತಿರತ್ ಸಿಂಗ್ ರಾವತ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಆದರೆ, ಈ ಮೊದಲು ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಬಳಿಕ ಸಿಎಂ ಹುದ್ದೆಯ ಸ್ಪರ್ಧೆಯಲ್ಲಿ ರಮೇಶ್ ಪೋಖ್ರಿಯಲ್ ನಿಶಾಂಕ್, ಅಜಯ್ ಭಟ್, ಧನ್ ಸಿಂಗ್ ರಾವತ್ ಹೆಸರಿಸಲಾಗಿತ್ತು.
2013ರ ಫೆಬ್ರವರಿ 9ರಿಂದ 2015ರ ಡಿಸೆಂಬರ್ 31ರವರೆಗೆ ಉತ್ತರಾಖಂಡದಲ್ಲಿ ಬಿಜೆಪಿ ಮುಖ್ಯಸ್ಥರಾಗಿದ್ದ ತಿರತ್ ಸಿಂಗ್ ರಾವತ್, 2012ರಿಂದ 2017ರ ವರೆಗೆ ಚೌಬತ್ತಖಲ್ ಕ್ಷೇತ್ರದಿಂದ ಉತ್ತರಾಖಂಡ್ ವಿಧಾನಸಭೆಗೆ ಮಾಜಿ ಸದಸ್ಯರಾಗಿದ್ದರು.
ಇಂದು ಅಧಿಕಾರ ಸ್ವೀಕಾರ:
ಉತ್ತರಾಖಂಡದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ತಿರತ್ ಸಿಂಗ್ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮಧ್ಯಾಹ್ನ ನಾಲ್ಕು ಗಂಟೆಗೆ ರಾಜ್ ಭವನದಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.