ಬೆಂಗಳೂರು, ಮಾ.10 (DaijiworldNews/PY): ಭಾರತದ ಸ್ಯಾಟಲೈಟ್ ಮ್ಯಾನ್ ಬಿರುದು ಪಡೆದ ವಿಜ್ಞಾನಿ, ಇಸ್ರೋದ ಮಾಜಿ ಮುಖ್ಯಸ್ಥ ಉಡುಪಿ ರಾಮಚಂದ್ರರಾವ್ ಅವರ 89ನೇ ಹುಟ್ಟುಹಬ್ಬದ ದಿನದಂದು ಗೂಗಲ್ ಡೂಡಲ್ ಮೂಲಕ ಗೌರವಿಸಿದೆ.
ರಾಮಚಂದ್ರರಾವ್ ಅವರು ಉಡುಪಿ ಸಮೀಪದ ಮಾರ್ಪಳ್ಳಿಯಲ್ಲಿ ಮಾರ್ಚ್ 10, 1932ರಲ್ಲಿ ಜನಿಸಿದರು. ಇವರ ತಾಯಿ ಕೃಷ್ಣವೇಣಿ, ತಂದೆ ಲಕ್ಷ್ಮೀನಾರಾಯಣ ರಾವ್.
ತಮ್ಮ ಗೆಳಯರು, ಆತ್ಮೀಯರಿಗೆ ಹಾಗೂ ಸಹೋದ್ಯೋಗಿಗಳಿಗೆ ಡಾ.ಯು.ಆರ್.ರಾವ್ ಎಂದೇ ಚಿರಪರಿಚಿತರಾಗಿರುವ ರಾಮಚಂದ್ರರಾವ್ ಅವರು, ಇಸ್ರೋದ ಮಾಜಿ ಮುಖ್ಯಸ್ಥರಾಗಿ ಮಹತ್ವವಾದ ಸಾಧನೆ ಮಾಡಿದ್ದಾರೆ. ಇವರು, ಅಂತರಾಷ್ಟ್ರೀಯ ವೈಮಾನಿಕ ಫೆಡರೇಷನ್ ಸಂಸ್ಥೆ, ಬಾಹ್ಯಾಕಾಶ ವಿಜ್ಞಾನದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಾರೆ.
ರಾಮಚಂದ್ರರಾವ್ ಅವರು ಉಡುಪಿ ಸೇರಿದಂತೆ, ಬಸಾರಸ್, ಮದ್ರಾಸ್ ಹಾಗೂ ಅನಂತಪುರ ಹಾಗೂ ಮೊದಲಾದ ಸ್ಥಳಗಳಲ್ಲಿ ಅಧ್ಯಯನ ಮಾಡಿದರು. ಇವರು ಕಾಸ್ಮಿಕ್-ರೇ ಭೌತಶಾಸ್ತ್ರಜ್ಞರಾಗಿ ಹಾಗೂ ಡಾ.ವಿಕ್ರಮ್ ಸಾರಾಭಾಯ್ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ವಿಕ್ರಮ್ ಸಾರಾಭಾಯಿ ಅವರ ಮಾರ್ಗದರ್ಶನದಲ್ಲಿ ವಿಶ್ವಕಿರಣ ಬಗ್ಗೆ ಅಧ್ಯಯನ ಮಾಡಿ ಗುಜರಾತ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಬಳಿಕ ಉನ್ನತ ವ್ಯಾಸಂಗಕ್ಕಾಗಿ ಅಮೇರಿಕಾಕ್ಕೆ ತೆರಳಿದ್ದರು. ಅಲ್ಲಿ ಅವರು ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ, ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದು, ಬಳಿಕ 1966ರಲ್ಲಿ ಭಾರತಕ್ಕೆ ವಾಪಾಸ್ಸಾದರು.
ಭಾರತಕ್ಕೆ ಮರಳಿದ ಅವರು, 1972ರಲ್ಲಿ ತಮ್ಮ ದೇಶದ ಉಪಗ್ರಹ ಕಾರ್ಯಕ್ರಮವನ್ನು ಮುನ್ನಡೆಸುವ ಮುನ್ನ ಬಾಹ್ಯಾಕಾಶ ವಿಜ್ಞಾನಕ್ಕಾಗಿ ಭಾರತದ ಪ್ರಮುಖ ಸಂಸ್ಥೆಯಾದ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯಲ್ಲಿ ವ್ಯಾಪಕವಾದ ಉನ್ನತ ಶಕ್ತಿಯ ಖಗೋಳವಿಜ್ಞಾನ ಕಾರ್ಯಕ್ರವನ್ನು ಆರಂಭಿಸಿದರು. ಬಳಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
2013ರಲ್ಲಿ ಸ್ಯಾಟಲೈಟ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆಗೆ ರಾವ್ ಪಾತ್ರರಾಗಿದ್ದರು. ಇವರ ಸಾಧನೆಗೆ ಪದ್ಮ ವಿಭೂಷಣ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ನಾಸಾ ಪುರಸ್ಕಾರ ಮೊದಲಾದ ಗೌರವಗಳು ಲಭಿಸಿವೆ.
ರಾವ್ ಅವರು 2017ರ ಜುಲೈ 24 ರಂದು ಬೆಂಗಳೂರಿನಲ್ಲಿ ನಿಧನರಾದರು.