ಬೆಂಗಳೂರು, ಮಾ.10 (DaijiworldNews/PY): ಬೆಂಗಳೂರಿನ 103 ವರ್ಷದ ಜೆ.ಕಾಮೇಶ್ವರಿ ಅವರು ಕೊರೊನಾ ಲಸಿಕೆ ಪಡೆದ ದೇಶದ ಅತೀ ಹಿರಿಯ ನಾಗರಿಕರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೇಶದಲ್ಲಿ ಹಿರಿಯ ನಾಗರಿಕರಿಗೆ ಮಾರ್ಚ್ 1ರಿಂದ ಕೊರೊನಾ ಲಸಿಕೆ ನೀಡಲು ಪ್ರಾರಂಭಿಸಲಾಗಿತ್ತು. ಇದೀಗ ಕೊರೊನಾ ಲಸಿಕೆ ಪಡೆದ 103 ವರ್ಷದ ಜೆ.ಕಾಮೇಶ್ವರಿ ಅವರು ಅತೀ ಹಿರಿಯ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬನ್ನೇರುಘಟ್ಟದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಕುಟುಂಬ ಸಮೇತರಾಗಿ ಬಂದ ಕಾಮೇಶ್ವರಿ ಅವರು ಕೊರೊನಾ ಲಸಿಕೆ ಪಡೆದುಕೊಂಡರು. ಲಸಿಕೆ ಪಡೆದುಕೊಂಡ ಬಳಿಕ ಅವರ ಆರೋಗ್ಯದಲ್ಲಿ ಯಾವುದೇ ಏರು ಪೇರು ಕಂಡುಬಂದಿಲ್ಲ ಎಂದು ವರದಿಯಾಗಿದೆ.
ಈ ಸಂದರ್ಭ ಕಾಮೇಶ್ವರಿ ಅವರ ಮಗ ಪ್ರಸಾದ್ ರಾವ್ (77) ಅವರು ಕೂಡಾ ಕೊರೊನಾ ಲಸಿಕೆ ಹಾಕಿಸಿಕೊಂಡರು.
ಇದಕ್ಕೂ ಮುನ್ನ ಮುಂಬೈನ ಶಶಿಕಲಾ ಜೋಶಿ (100) ಅವರು ಕೊರೊನಾ ಲಸಿಕೆ ಪಡೆದ ಅತೀ ಹಿರಿಯ ಮಹಿಳೆ ಎನಿಸಿಕೊಂಡಿದ್ದರು. ಮಾರ್ಚ್ 9ರ ಮಂಗಳವಾರದಂದು ನೋಯ್ಡಾದ 103 ವರ್ಷದ ವೃದ್ದರೋರ್ವರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮಹಾಬೀರ್ ಪ್ರಸಾದ್ ಮಹೇಶ್ವರಿ ಎನ್ನುವ ವ್ಯಕ್ತಿ ತಮ್ಮ 81 ವರ್ಷದ ಪುತ್ರ ಸುದರ್ಶನ್ ದಯಾಳ್ ಜೊತೆ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.