ಬೆಂಗಳೂರು, ಮಾ. 09 (DaijiworldNews/SM): ಹಾಸನ ಜಿಲ್ಲೆಯಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿ ನಡೆದ ಗಲಾಟೆ ಕುರಿತಂತೆ ನಟ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಹಾಸನದವನು. ಅದಕ್ಕಿಂತ ಮಿಗಿಲಾಗಿ ನಾನು ಕನ್ನಡಿಗ. ಯಾವುದೇ ಪ್ರದೇಶದಲ್ಲೂ ಜಮೀನು ಕೊಂಡುಕೊಳ್ತೀನಿ ಎಂದಿದ್ದಾರೆ.
ಹಾಸನದ ತಿಮ್ಮಲಾಪುರದಲ್ಲಿ ಕೃಷಿ ಜಮೀನಿಗೆ ಕಾಂಪೌಂಡ್ ನಿರ್ಮಿಸುವಾಗ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿತ್ತು. ಯಶ್ ಪೋಷಕರು ಹಾಗೂ ಗ್ರಾಮಸ್ಥರ ನಡುವೆ ಘರ್ಷಣೆಯುಂಟಾಗಿತ್ತು. ಈ ಸಂಬಂಧ ಸ್ವತಃ ಯಶ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರವಾಗಿ ಯಶ್ ಕುಟುಂಬದವರ ಜೊತೆ ತಿಮ್ಮೇನಹಳ್ಳಿ ಗ್ರಾಮದವರು ಗಲಾಟೆ ನಡೆಸಿದ್ದರು.
ಯಶ್ ಅವರ ತಂದೆ ಅರುಣ್ ಕುಮಾರ್ ಮತ್ತು ತಾಯಿ ಪುಷ್ಪ ಇಬ್ಬರು ತಮ್ಮ ಜಮೀನಿನಲ್ಲಿ ಕೆಲಸ ಮಾಡಿಸುತ್ತಿರುವಾಗ ಗ್ರಾಮಸ್ಥರ ನಡುವೆ ಮಾತಿಗೆ ಮಾತು ಬೆಳೆದಿದೆ. ಜಮೀನಿಗೆ ರಸ್ತೆ ನಿರ್ಮಾಣ ಮಾಡಲು ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿದ್ದ ವೇಳೆ ಗ್ರಾಮಸ್ಥರು ಅಡ್ಡಿ ಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ಬೆಂಬಲಿಗರು ಹಾಗೂ ಗ್ರಾಮಸ್ಥರ ನಡುವೆ ಗಲಾಟೆ ನಡೆದಿದೆ. ಬಳಿಕ ಪೊಲೀಸರ ಸಹಕಾರದಿಂದ ಪರಿಸ್ಥಿತಿ ತಿಳಿಗೊಳಿಸಲಾಗಿದೆ.