ಬೆಂಗಳೂರು, ಮಾ.09 (DaijiworldNews/MB): ಕಾಂಗ್ರೆಸ್ ನ ಹಲವು ಜನರು ಬಿಜೆಪಿಯ ಕದ ತಟ್ಟುತ್ತಿದ್ದಾರೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾರ್ಚ್ 9 ಮಂಗಳವಾರ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನಳಿನ್, "ಬಾಗಿಲು ತೆರೆಯಬೇಕೆ ಅಥವಾ ಬೇಡವೇ ಎಂದು ನಾವು ಇನ್ನೂ ನಿರ್ಧರಿಸಬೇಕಾಗಿಲ್ಲ. ಕಾಂಗ್ರೆಸ್ ಖಾಲಿಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಆಂತರಿಕ ಸಂಘರ್ಷದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಆದ್ದರಿಂದ, ಪಕ್ಷದ ಕಾರ್ಯಕರ್ತರು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಪಕ್ಷಕ್ಕೆ ಸೇರಲು ಯೋಚಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ಕಾಂಗ್ರೆಸ್ ಅನ್ನು ಪ್ರತಿಪಕ್ಷಗಳಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡುತ್ತದೆ ಎಂದು ಕೂಡಾ ಹೇಳಿದರು. ಸೋಮವಾರ ಬಜೆಟ್ ಮಂಡನೆ ಮಾಡಿದ ಬಳಿಕ ಮಾತನಾಡಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, 'ಮುಂದಿನ ಬಾರಿಯೂ ಸಿದ್ದರಾಮಯ್ಯರನ್ನು ವಿಪಕ್ಷದಲ್ಲೇ ಕೂರಿಸದಿದ್ರೆ ನಾನು ಯಡಿಯೂರಪ್ಪನೇ ಅಲ್ಲ' ಎಂದು ಸವಾಲು ಹಾಕಿರುವುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.
"ನಿನ್ನೆ, ಯಡಿಯೂರಪ್ಪ ಅವರು ಸಿದ್ದರಾಮಯ್ಯ ಅವರನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗುವುದು ಎಂದು ಹೇಳಿದರು. ಆದ್ದರಿಂದ, ಯಡಿಯೂರಪ್ಪ ಹೇಳಿದಂತೆ, ನಮ್ಮ ತಂಡವು ಕೆಲಸ ಮಾಡುತ್ತದೆ ಮತ್ತು ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿರಿಸುತ್ತದೆ" ಎಂದು ನಳಿನ್ ಹೇಳಿದರು.
"ರಾಜಕೀಯದಲ್ಲಿ ಬದಲಾವಣೆಯ ಗಾಳಿ ಇದೆ. ಬಸವಕಲ್ಯಾಣದಲ್ಲಿ 'ಬೌಲ್ಡರ್' ಅಥವಾ 'ಟೈಗರ್'ಗೆ ಶಕ್ತಿಯಿಲ್ಲ. ಅಶೋಕ್ ಖೇನಿ ಅವರ ಸಹೋದರ ಸಂಜಯ್ ಖೇನಿ ಬಿಜೆಪಿಗೆ ಸೇರಿದರು. ಜನರು ಬಿಜೆಪಿಗೆ ಸೇರಲು ಸರದಿ ನಿಂತಿದ್ದಾರೆ. ನಾವು ಬೆಳಗಾವಿಯಲ್ಲಿ ಜಯಗಳಿಸುತ್ತೇವೆ. ಈ ಬದಲಾವಣೆಯಿಂದ ಕಾಂಗ್ರೆಸ್ ಭಯಭೀತರಾಗಿದೆ. ಮಸ್ಕಿಯಲ್ಲಿ ಚುನಾವಣೆ ಘೋಷಣೆಯ ಮೊದಲು ನಾವು ಕಾಂಗ್ರೆಸ್ ಪಕ್ಷವನ್ನು ಇಲ್ಲವಾಗಿಸುತ್ತೇವೆ. ಕಾಂಗ್ರೆಸ್ ಅನ್ನು ಶಾಶ್ವತವಾಗಿ ವಿರೋಧಿ ಪಕ್ಷವನ್ನಾಗಿ ಮಾಡಲಾಗುವುದು" ಎಂದರು.