ಬೆಂಗಳೂರು, ಮಾ.09 (DaijiworldNews/HR): ಸದನದಲ್ಲಿ ಕಾಂಗ್ರೆಸ್ ಸದಸ್ಯರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದ್ದು, ಇದಕ್ಕೆ ಬಿಜೆಪಿ ಸದಸ್ಯರು ಕಾಲೆಳೆದ ಘಟನೆಯೂ ನಡೆಯಿತು.
ಪೆಟ್ರೋಲ್, ಡೀಸೆಲ್ ದರ ಏರಿಕೆ ವಿಚಾರವಾಗಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ," ಶ್ರೀರಾಮನ ಭಾರತದಲ್ಲಿ ಪೆಟ್ರೋಲ್ ದರ ಏರಿಕೆ ಆಗುತ್ತಿದೆ ರಾವಣನ ಲಂಕಾದಲ್ಲಿ ಕಡಿಮೆ ಇದೆ" ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಮಾಡಿದ ಟ್ವೀಟ್ ಅನ್ನು ಉಲ್ಲೇಖ ಮಾಡಿದ್ದಾರೆ.
ಇನ್ನು ಈ ವೇಳೆ ಭಾರತ್ ಮಾತಾಕೀ ಜೈ ಹಾಗೂ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿ ಕಾಂಗ್ರೆಸ್ ಸದಸ್ಯರು ಬಿಜೆಪಿ ಪಕ್ಷವನ್ನು ಕಾಲೆಳೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, "ಕೊನೆಗೂ ನಿಮ್ಮ ಬಾಯಲ್ಲಿ ಜೈ ಶ್ರೀರಾಮ ಕೇಳಿ ಖುಷಿ ಆಯಿತು" ಎಂದು ಹಾಸ್ಯ ಮಾಡಿದ್ದಾರೆ.
ಇದೇ ವೇಳೆ ಎದ್ದು ನಿಂತ ಸಿದ್ದರಾಮಯ್ಯ, "ನನ್ನ ಹೆಸರಿನಲ್ಲೇ ರಾಮ ಇದ್ದಾನೆ. ನೀವು ರಾಮನನ್ನು ಗುತ್ತಿಗೆ ಪಡೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದು, ತಮ್ಮ ನಾಯಕನ ಜತೆಗೂಡಿದ ಕಾಂಗ್ರೆಸ್ ನಾಯಕರು ನಾವು ರಾಮನ ಹೆಸರನ್ನು ರಾಜಕೀಯಕ್ಕೆ ಬಳಕೆ ಮಾಡುವುದಿಲ್ಲ" ಎಂದು ಹೇಳಿದರು.