ಮೈಸೂರು, ಮಾ.09 (DaijiworldNews/PY): "ಬಾಂಬೆ ತೆರಳಿದ್ದವರು ಬೆತ್ತಲೆ ಬೆಲ್ಲಿ ಡ್ಯಾನ್ಸ್ ನೋಡಿದ ವಿಡಿಯೋಗಳು ಬಿಜೆಪಿ ಬಳಿ ಇವೆ" ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಏಕೆ ಧನ್ಯವಾದ ತಿಳಿಸಿದರು ಎಂದು ನನಗೆ ತಿಳಿದಿಲ್ಲ. ಸಿ.ಡಿ ನಕಲಿ ಎಂದಾದರೆ ಸಚಿವ ಸ್ಥಾನಕ್ಕೆ ಏಕೆ ರಾಜೀನಾಮೆ ನೀಡಿದ್ದು?. ಈ ಬಗ್ಗೆ ಇಲ್ಲಿಯವರೆಗೆ ಏಕೆ ದೂರು ನೀಡಿಲ್ಲ?" ಎಂದು ಕೇಳಿದ್ದಾರೆ.
"ಬಿಜೆಪಿಯು, ಸಿ.ಡಿಯ ನಿರ್ದೇಶನ, ರಚನೆ ಹಾಗೂ ಎಲ್ಲವನ್ನೂ ಮಾಡಿದೆ. ಸಿ.ಡಿ ರಚನೆ ಹೇಗೆ ಮಾಡುತ್ತಾರೆ ಎನ್ನುವುದನ್ನು ಸಚಿವ ಸಿ.ಪಿ ಯೋಗೇಶ್ವರ್ ಅವರನ್ನು ಕೇಳಿ. ಈ ಬಗ್ಗೆ ಅವರೇ ಮೈಸೂರಿನಲ್ಲಿ ಹೇಳಿದ್ದಾರೆ. ಬಾಂಬೆಗೆ ತೆರಳಿದ್ದವರಿಗೆ ಬೇಸರವಾಗದ ರೀತಿಯಲ್ಲಿ ನೋಡಿಕೊಂಡಿದ್ದಾರೆ. ಎಲ್ಲಾ ರೀತಿಯ ಡ್ಯಾನ್ಸ್ ಮಾಡಿದ್ದಾರೆ, ನೋಡಿದ್ದಾರೆ. ಇದರ ಎಲ್ಲಾ ಸಿ.ಡಿಗಳು ಬಿಜೆಪಿ ಬಳಿ ಇವೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಬಿಜೆಪಿಯವರು, ಬಾಂಬೆಗೆ ತೆರಳಿದವರ ವೀಕ್ನೆಸ್ಗಳ ಆಧಾರದ ಮೇಲೆ ಎಲ್ಲರ ಜುಟ್ಟು ಹಿಡಿದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಜೋಕರ್ ರೀತಿ ಮಾತನಾಡುತ್ತಿದ್ದಾರೆ. ಒಳ್ಳೆಯ ಹಾಗೂ ಕೆಟ್ಟ ವಿಚಾರಗಳಿಗೆ ಕಾಂಗ್ರೆಸ್ಗೆ ಹೊಣೆ ಮಾಡುತ್ತೀರಾ?. ನೀವು ಬಿಜೆಪಿ ಅಧ್ಯಕ್ಷರಾ?" ಎಂದು ಪ್ರಶ್ನಿಸಿದ್ದಾರೆ.
"ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಿ, ಅವರು 24 ಗಂಟೆಯಲ್ಲಿ ಈ ಪ್ರಕರಣದ ಅಸಲಿ ಕಥೆಯನ್ನು ಬಯಲು ಮಾಡುತ್ತಾರೆ. ದಿನೇಶ್ ಕಲ್ಲಹಳ್ಳಿ ಯಾವ ಪಕ್ಷ ಮುಖಂಡನ ಹಿಂಬಾಲಕ ಎನ್ನುವುದು ತನಿಖೆಯಾಗಬೇಕು" ಎಂದು ಒತ್ತಾಯಿಸಿದ್ದಾರೆ.