ಮಂಡ್ಯ, ಮಾ.09 (DaijiworldNews/MB): ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ತಾನು ಹತ್ಯೆಗೈದಿದ್ದು ಬಳಿಕ ಆಕೆ ದೆವ್ವವಾಗಿ ಬಂದು ತನ್ನನ್ನು ಕಾಡುತ್ತಾಳೆ ಎಂಬ ಭಯಕ್ಕೆ ಒಳಗಾಗಿ ಆಕೆಯ ದೇಹವನ್ನು ತುಂಡುತುಂಡಾಗಿ ಕತ್ತರಿಸಿ ನದಿಗೆ ಎಸೆದ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೆಆರ್ಪೇಟೆ ತಾಲೂಕಿನ ಬಂಡಿಹೊಳೆ ಸಮೀಪ ಹೇಮಾವತಿ ನದಿಯಲ್ಲಿ ಕಳೆದ ನವಂಬರ್ 17 ರಂದು ಮಹಿಳೆಯೊಬ್ಬಳ ತುಂಡರಿಸಿದ ದೇಹ ಸಿಕ್ಕಿದ್ದು ಈ ಪ್ರಕರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು.
ಜಿಲ್ಲೆಯ ಎಲ್ಲಾ ಠಾಣೆಗಳಿಗೂ ಪೊಲೀಸರು ಮಾಹಿತಿ ನೀಡಿದ್ದರೂ ಕೂಡಾ ಪೊಲೀಸರಿಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಬಳಿಕ ವ್ಯಕ್ತಿಯೋರ್ವರು ಕಳೆದ ತಿಂಗಳು ಪಾಂಡವಪುರ ಪೊಲೀಸ್ ಠಾಣೆಗೆ ದೇಶವಳ್ಳಿ ಗ್ರಾಮದ ವ್ಯಕ್ತಿ ತನ್ನ ಮಗಳು ಆಶಾ ನಾಲ್ಕು ತಿಂಗಳಿನಿಂದ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ.
ಪೊಲೀಸರು ದೂರು ನೀಡಿದ ವ್ಯಕ್ತಿಯನ್ನು ವಿಚಾರಣೆ ನಡೆಸಿ ತುಂಡರಿಸಿದ ದೇಹದ ಫೋಟೋವನ್ನು ತೋರಿಸಿದ ಬಳಿಕ ತನ್ನ ಮಗಳ ಕೈ ಮೇಲೆ ಇದ್ದ ಟ್ಯಾಟುವಿನ ಮೂಲಕ ತಂದೆಯು ಈ ದೇಹದ ಗುರುತು ಹಚ್ಚಿದ್ದಾನೆ. ಬಳಿಕ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಆಶಾಳ ಗಂಡ ರಂಗಪ್ಪ ಹಾಗೂ ಬಾವ ರಾಮಚಂದ್ರ ಅವರನ್ನು ವಿಚಾರಣೆ ನಡೆಸಿದರು.
ವಿಚಾರಣೆಯ ವೇಳೆ ಇವರಿಬ್ಬರು ಆಕೆಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆಕೆಗೆ ಅಕ್ರಮ ಸಂಬಂಧವಿದ್ದ ಕಾರಣ ನಾವು ಆಕೆಯನ್ನು ಕೊಂದೆವು. ಆದರೆ ಬಳಿಕ ಆಕೆ ದೆವ್ವವಾಗಿ ಬಂದರೆ ಎಂಬ ಭಯದಿಂದ ಆಕೆಯ ದೇಹವನ್ನು ತುಂಡುತುಂಡು ಮಾಡಿ ನದಿಗೆ ಎಸೆದೆವು ಎಂದು ಹೇಳಿದ್ದಾರೆ.
ಸದ್ಯ ಇಬ್ಬರು ಕೂಡಾ ಜೈಲುಪಾಲಾಗಿದ್ದು, ಮೂವರು ಮಕ್ಕಳು ಅನಾಥರಾಗಿದ್ದಾರೆ.