ಷಹಜಾನ್ಪುರ, ಮಾ.09 (DaijiworldNews/PY): ಮಹಿಳೆಯೋರ್ವರು 27 ವರ್ಷಗಳ ಹಿಂದೆ ನಡೆದ ಅನ್ಯಾಯದ ಬಗ್ಗೆ ಇತ್ತೀಚೆಗೆ ದೂರು ನೀಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಉತ್ತರಪ್ರದೇಶದ ಷಹಜಾನ್ಪುರದಲ್ಲಿ ಮಹಿಳೆಯೋರ್ವರ ಮೇಲೆ 27 ವರ್ಷಗಳ ಹಿಂದೆ ಅತ್ಯಾಚಾರವಾಗಿದೆ. ಈಗ ಆ ಮಹಿಳೆಗೆ 40 ವರ್ಷ. ನನ್ನ ತಂದೆಯ ಯಾರು ಎನ್ನುವ ಬಗ್ಗೆ ನನಗೆ ತಿಳಿಯಬೇಕು ಎಂದು ಆಕೆಯ ಮಗ ತಾಯಿಯ ಬಳಿ ಕೇಳಿದ್ದು, ಆ ಕಾರಣದಿಂದ ಮಹಿಳೆಯ 27 ವರ್ಷಗಳ ಹಿಂದೆ ತನ್ನ ಮೇಲೆ ಅತ್ಯಚಾರ ನಡೆಸಿದ ಆರೋಪಿಗಳ ವಿರುದ್ದ ದೂರು ನೀಡಿದ್ದಾಳೆ.
"13 ವರ್ಷದವಳಿದ್ದಾಗ, ನಾನು ನನ್ನ ಸಂಬಂಧಿಕರ ಮನೆಯಲ್ಲಿ ಇದ್ದೆ. ಆ ಸಂದರ್ಭ ನನ್ನ ಮೇಲೆ ಅತ್ಯಾಚಾರವಾಗಿತ್ತು. ಮರ್ಯಾದೆಗೆ ಹೆದರಿದ್ದ ನಾನು, ನನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ, ಇದೀಗ ನನ್ನ ಮಗ ತನ್ನ ಅಪ್ಪನ ಯಾರು ಎಂದು ಕೇಳುತ್ತಿದ್ದಾನೆ. ಹಾಗಾಗಿ ನಾನು ದೂರು ದಾಖಲಿಸಿದ್ದೇನೆ" ಎಂದು ದೂರಿನಲ್ಲಿ ತಿಳಿಸಿದ್ದಾರೆ.
"ದೂರುದಾರ ಮಹಿಳೆಯ ಮನೆಯ ಸಮೀಪವಿದ್ದ ನಾಕಿ ಹಸನ್ ಎನ್ನುವಾತ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಅತ್ಯಾಚಾರ ವೆಸಗಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ" ಎಂದು ಎಸ್ಪಿ ಸಂಜಯ್ ಕುಮಾರ್ ಹೇಳಿದ್ದಾರೆ.
ಅತ್ಯಾಚಾರ ನಡೆದ ಬಳಿಕ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ವಿಚಾರವನ್ನು ತಿಳಿದ ಆಕೆಯ ಕುಟುಂಬದವರು ಆಕೆಯನ್ನು ಸಂಬಂಧಿಕರ ಮನೆಗೆ ಕಳುಹಿಸಿದ್ದಾರೆ. ಅಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಆ ಮಗುವನ್ನು ದತ್ತು ನೀಡಲಾಗಿತ್ತು ಎಂದು ಹೇಳಲಾಗಿದೆ.
ಇದಾದ ಬಳಿಕ ಮಗ ಹಾಗೂ ತಾಯಿ ಒಂದಾಗಿದ್ದು, ತನ್ನ ತಂದೆ ಯಾರು ಎಂದು ಮಗ ತಾಯಿಯನ್ನು ಕೇಳಿದ್ದು, ಹಾಗಾಗಿ ಆಕೆ ಪ್ರಕರಣ ದಾಖಲಿಸಲು ತೀರ್ಮಾಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.