ತಮಿಳುನಾಡು, ಮಾ.09 (DaijiworldNews/HR): ಒಂದೂವರೆ ವರ್ಷದ ಹಿಂದೆ ನಾಪತ್ತೆಯಾಗಿದ್ದ 40 ವರ್ಷದ ವ್ಯಕ್ತಿಯ ಕೊಳೆತ ಅವಶೇಷಗಳನ್ನು ಬಾವಿಯೊಳಗೆ ಮುಚ್ಚಿದ ಲೋಹದ ಬ್ಯಾರೆಲ್ನಲ್ಲಿ ತಮಿಳುನಾಡಿನ ಕಾಂಚೀಪುರಂ ಪೊಲೀಸರು ಪತ್ತೆ ಮಾಡಿದ್ದಾರೆ.
ಆಟೋಮೊಬೈಲ್ ಕಾರ್ಖಾನೆಯೊಂದರಲ್ಲಿ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ಮೃತ ಕೊಂಜಿ ಅಡೈಕ್ಕನ್( 40) ಎಂಬಾತ 2019 ರ ಆಗಸ್ಟ್ನಲ್ಲಿ ನಾಪತ್ತೆಯಾಗಿದ್ದು, ಈ ಪ್ರಕರಣದಲ್ಲಿ ಏಳು ಮಂದಿಯನ್ನು ಬಂಧಿಸಲಾಗಿದೆ.
ಕಾಣೆಯಾದ ಗಂಡನ ಬ್ಯಾಂಕ್ ಖಾತೆಯಿಂದ ಪತಿಯ ಸೋದರ ಸಂಬಂಧಿಯ ಪತ್ನಿ ಚಿತ್ರಾಗೆ 3.5 ಲಕ್ಷ ರೂ.ಗೆ ಬ್ಯಾಂಕ್ ವರ್ಗಾವಣೆ ಮಾಡಲಾಗಿದೆ ಎಂದು ಕೊಂಜಿ ಅಡೈಕ್ಕನ್ ಅವರ ಪತ್ನಿ ಪನಿಯಮ್ಮಲ್ ದೂರಿದ್ದು, ಇದರ ಆಧಾರದ ಮೇಲೆ ಪೊಲೀಸರು ಚಿತ್ರಾ (47) ಅವರನ್ನು ಪ್ರಶ್ನಿಸಿದ್ದು, ಇಡೀ ಪ್ರಕರಣ ಬಿಚ್ಚಿಟ್ಟಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರ ಪ್ರಕಾರ, ಕೊಂಜಿ ಅಡೈಕ್ಕನ್ ಅವರು 2015 ರಲ್ಲಿ ಪನಿಯಮ್ಮಲ್ ಅವರನ್ನು ಮದುವೆಯಾಗುವ ಮೊದಲು 2009 ರಿಂದ ಚಿತ್ರಾ ಜೊತೆ ಸಂಬಂಧ ಹೊಂದಿದ್ದರು. ಆದಾಗ್ಯೂ, ಚಿತ್ರಾ ಅವರು ತಮ್ಮೊಂದಿಗಿನ ಸಂಬಂಧವನ್ನು ಮುಂದುವರೆಸುವಂತೆ ಒತ್ತಾಯಿಸಿದರು, ಇದು ಅವರ ಮತ್ತು ಕೊಂಜಿ ಅಡೈಕ್ಕನ್ ನಡುವಿನ ಭಿನ್ನಾಭಿಪ್ರಾಯಗಳಿಗೆ ಕಾರಣವಾಯಿತು. ಅವನ ನಿರಾಕರಣೆಯಿಂದ ಕೋಪಗೊಂಡ ಚಿತ್ರಾ ತನ್ನನ್ನು ಭೇಟಿಯಾಗುವಂತೆ ಕೊಂಜಿ ಅಡೈಕ್ಕನ್ಗೆ ಹೇಳಿದ್ದಾಳೆ.
ಇನ್ನು ಕೊಂಜಿ ಅಡೈಕ್ಕನ್ ಅಲ್ಲಿಗೆ ತಲುಪಿದಾಗ ಎಲುಮಲೈ ಮತ್ತು ಅವನ ಸಹಚರರನ್ನು ಒಳಗೊಂಡ ಗ್ಯಾಂಗ್ ಕೊಂಜಿ ಅಡೈಕ್ಕನ್ ಅವರನ್ನು ಹತ್ಯೆ ಮಾಡಿ ಅವನ ದೇಹವನ್ನು ಬ್ಯಾರೆಲ್ನಲ್ಲಿ ತುಂಬಿಸಿ ಕಾಂಕ್ರೀಟ್ನಿಂದ ಮುಚ್ಚಿಹಾಕಿ ನಂತರ ಸಲಾಮಾಂಗಲಂ ಗ್ರಾಮದ ಬಾವಿಯೊಳಗೆ ಬ್ಯಾರೆಲ್ ಎಸೆಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಚಿತ್ರಾ, ಆಕೆಯ ಮಗ ರಂಜಿತ್ (24), ಎಲುಮಲೈ, ವಿವೇಕಾನಂದನ್ (26), ಟಾರ್ಜನ್ (29), ಸತೀಶ್ (26) ಮತ್ತು ಸುಬ್ರಮಣಿ (30) ಎಂಬ ಏಳು ಜನರನ್ನು ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.