ರಾಜಸ್ಥಾನ, ಮಾ.09 (DaijiworldNews/MB): ''ಅಲ್ವಾರ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋದ 26 ವರ್ಷದ ಮಹಿಳೆಯನ್ನು ರಾಜಸ್ಥಾನ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೂರು ದಿನಗಳ ಕಾಲ ಅತ್ಯಾಚಾರ ಎಸಗಿದ್ದಾನೆ'' ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
''ಪೊಲೀಸ್ ಠಾಣೆಯ ಕಾಂಪೌಂಡ್ನಲ್ಲಿರುವ ಆರೋಪಿ ಸಬ್ ಇನ್ಸ್ಪೆಕ್ಟರ್ ವಾಸಿಸುತ್ತಿದ್ದ ರೂಮಿನಲ್ಲಿ ಈ ಅಪರಾಧ ನಡೆದಿದೆ'' ಎಂದು ಪೊಲೀಸರು ತಿಳಿಸಿದ್ದಾರೆ. ''ಪತಿಯ ವಿರುದ್ಧ ಮಹಿಳೆಯು ದೂರು ನೀಡಲು ಮಾರ್ಚ್ 2 ರಂದು ಪೊಲೀಸ್ ಬಳಿ ಬಂದಿದ್ದಳು'' ಎಂದು ಪೊಲೀಸರು ತಿಳಿಸಿದ್ದಾರೆ.
"2018 ರಲ್ಲಿ, ಮಹಿಳೆಯು ತನ್ನ ಗಂಡನ ಮೇಲೆ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಳು. ನಂತರ ಅದನ್ನು ಇತ್ಯರ್ಥಪಡಿಸಲಾಯಿತು. ಆದರೆ ಈಗ ಆ ಮಹಿಳೆಯ ಪತಿ ವಿಚ್ಛೇಧನ ನೀಡಲು ಬಯಸಿದ್ದು ಆಕೆ ಅದಕ್ಕೆ ಸಮ್ಮತಿಸಿಲ್ಲ. ಈ ವಿಷಯಕ್ಕೆ ಸಂಬಂಧಿಸಿ ದೂರು ನೀಡಲೆಂದು ಮಹಿಳೆಯು ಪೊಲೀಸ್ ಠಾಣೆಗೆ ಬಂದು ಸಬ್ ಇನ್ಸ್ಪೆಕ್ಟರ್ರನ್ನು ಸಂಪರ್ಕಿಸಿದ್ದಳು" ಎಂದು ಅಲ್ವಾರ್ ಪೊಲೀಸ್ ವರಿಷ್ಠಾಧಿಕಾರಿ ಸೋಮವಾರ ಮಾಹಿತಿ ನೀಡಿದ್ದಾರೆ.
''ಮಾರ್ಚ್ 2 ಮತ್ತು ಮಾರ್ಚ್ 4 ರ ನಡುವೆ ಮೂರು ದಿನಗಳ ಕಾಲ ಐವತ್ತರ ಹರೆಯದ ಅಧಿಕಾರಿ ಹಾಗೂ ಪೊಲೀಸ್ ಠಾಣೆಯಲ್ಲಿದ್ದ ಇನ್ನೋರ್ವ ಅಧಿಕಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಸಂಬಂಧ ಭಾನುವಾರ ಎಫ್ಐಆರ್ ದಾಖಲಿಸಲಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.
"ಘಟನೆಯ ಬಗ್ಗೆ ನಮಗೆ ತಿಳಿದ ನಂತರ, ಸೆಕ್ಷನ್ 376 (ಅತ್ಯಾಚಾರ) ಐಪಿಸಿ ಅಡಿಯಲ್ಲಿ ಭಾನುವಾರ ಎಫ್ಐಆರ್ ದಾಖಲಿಸಲಾಗಿದೆ, ಮತ್ತು ಆರೋಪಿ ಸಿಂಗ್ ಅವರನ್ನು ಬಂಧಿಸಲಾಯಿತು. ಆತ ಪೊಲೀಸ್ ವಶದಲ್ಲಿದ್ದಾನೆ. ಫೋನ್ ರೆಕಾರ್ಡಿಂಗ್ ಅನ್ನು ಮಹಿಳೆ ನೀಡಿದ್ದಾಳೆ. ಇದು ಆರೋಪವನ್ನು ಸಾಬೀತುಪಡಿಸುವಂತಿದೆ. ಪೊಲೀಸ್ ಠಾಣೆಯ ಎಸ್ಎಚ್ಒ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಅಲ್ವಾರ್ ಎಸ್ಪಿ ಹೇಳಿದರು.
''ಸಿಂಗ್ನ್ನು ಅಮಾನತುಗೊಳಿಸುವ ಮತ್ತು ಇತರ ಶಿಸ್ತು ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆ ನಾವು ಆರಂಭಿಸಿದ್ದೇವೆ. ಎಸ್ಎಚ್ಒ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಮಹಿಳೆಯ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗುವುದು ಮತ್ತು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ'' ಎಂದು ತಿಳಿಸಿದ್ದಾರೆ.