ಬೆಂಗಳೂರು, ಮಾ 09 (DaijiworldNews/MS): ರಾಜ್ಯ ರಾಜಕಾರಣವನ್ನು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಸದ್ಯದಲ್ಲೆ ಈ ಬಗ್ಗೆ ಆದೇಶ ಹೊರಬೀಳುವ ಸಾಧ್ಯತೆ ಇದೆ.
ರಮೇಶ್ ಜಾರಕಿಹೊಳಿ ಮಾತ್ರವಲ್ಲದೆ ಅನೇಕ ಸಚಿವರನ್ನೂ ಹನಿಟ್ರ್ಯಾಪ್ ಮಾಡಿ ಸಿಡಿ ಬಿಡುಗಡೆ ಮಾಡುವ ಪ್ಲಾನ್ ಬಗ್ಗೆ ಗುಮಾನಿ ಇದ್ದು, ಈ ಎಲ್ಲಾ ಕಾರಣಕ್ಕೆ ಸರ್ಕಾರ ಉನ್ನತ ಮಟ್ಟದ ತನಿಖೆಗೆ ವಹಿಸುವ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಇಂದು ಮುಖ್ಯಮಂತ್ರಿ ಜತೆ ಗೃಹ ಸಚಿವರು ಸಮಾಲೋಚನೆ ನಡೆಸಲಿದ್ದು, ನಂತರ ಹಿರಿಯ ಸಚಿವರೊಂದಿಗೆ ಚರ್ಚಿಸಿ ಸಿಐಡಿ ತನಿಖೆಗೆ ಸಿಎಂ ಆದೇಶಿಸಲಿದ್ದಾರೆ. ಅಲ್ಲದೆ ಸಿಡಿ ಪ್ರಕರಣದ ತನಿಖೆ ವಿಚಾರವಾಗಿ ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ಕಚೇರಿಯಲ್ಲಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ
ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ವೈರಲ್ ಆದ ಬೆನ್ನಲ್ಲೇ ನೈತಿಕ ಹೊಣೆಹೊತ್ತು ರಮೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆ ಬಳಿಕ ಈ ಬಗ್ಗೆ ದೂರು ನೀಡಿದ್ದ ದಿನೇಶ್ ಕಲ್ಲಹಳ್ಳಿ ಕೇಸ್ ಹಿಂಪಡೆದಿದ್ದರು. ಇಂದು ಸುದ್ದಿಗೋಷ್ಠಿ ನಡೆಸಿದ ಜಾರಕಿಹೊಳಿ, ಆ ಸಿಡಿ ನೂರಕ್ಕೆ ನೂರರಷ್ಟು ನಕಲಿ. ನಾನು ನಿರಪರಾಧಿ. ಇದೊಂದು ವ್ಯವಸ್ಥಿತ ರಾಜಕೀಯ ಷಡ್ಯಂತರ ಎಂದು ಹೇಳಿದ್ದರು.