ಘಾಜಿಯಾಬಾದ್, ಮಾ.09 (DaijiworldNews/MB): ಶಿಕ್ಷಕರೊಬ್ಬರು ಬೈದರಂದು ವಿದ್ಯಾರ್ಥಿಯೋರ್ವ ಅವರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ನ ಮುರಾದನಗರ್ ಪ್ರದೇಶದಲ್ಲಿ ಘಟಿಸಿದೆ.
ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಶಿಕ್ಷಕರು ಬುದ್ದಿವಾದ ಹೇಳುವುದು ಸಾಮಾನ್ಯ. ಅದರಂತೆ ಶಿಕ್ಷಕರೋರ್ವರು ವಿದ್ಯಾರ್ಥಿಗೆ ಬುದ್ದಿ ಮಾತು ಹೇಳಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಯು ಇತರೆ ವಿದ್ಯಾರ್ಥಿಗಳೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿತ್ತಿದ್ದ ಎಂಬ ಕಾರಣಕ್ಕೆ ಶಿಕ್ಷಕ ಸಚಿನ್ ತ್ಯಾಗಿ ಎಂಬವರು ಆತನಿಗೆ ತರಗತಿಯಲ್ಲಿ ಬೈದು ಬುದ್ದಿ ಮಾತು ಹೇಳಿದ್ದರು. ಇಷ್ಟಕ್ಕೆ ಕೋಪಗೊಂಡ ಆ ವಿದ್ಯಾರ್ಥಿ ಶಿಕ್ಷಕನನ್ನು ಹತ್ಯೆಗೈಯುವ ಸಂಚು ರೂಪಿಸಿದ್ದಾನೆ.
ವಿದ್ಯಾರ್ಥಿಯು ತನ್ನ ಮೂವರು ಸ್ನೇಹಿತರನ್ನೂ ಕೂಡಾ ಈ ಪ್ಲ್ಯಾನ್ನಲ್ಲಿ ಶಾಮೀಲು ಮಾಡಿದ್ದು ಶನಿವಾರ ಸಂಜೆ ಶಾಲೆ ಮುಗಿಸಿ ಶಿಕ್ಷಕ ಬೈಕ್ನಲ್ಲಿ ಮನೆಗೆ ವಾಪಾಸ್ ತೆರಳುತ್ತಿದ್ದ ಸಂದರ್ಭ ವಿದ್ಯಾರ್ಥಿಯು ಶಿಕ್ಷಕನನ್ನು ತಡೆದು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ಗುಂಡಿನ ಸದ್ದಿಗೆ ಜನರು ಓಡಿ ಬಂದಿದ್ದು ಕೂಡಲೇ ಶಿಕ್ಷಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕ್ಷಕ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇನ್ನು ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಪೊಲೀಸರು ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ವಿಚಾರಣೆ ಆರಂಭಿಸಿದ್ದಾರೆ.