ನವದೆಹಲಿ, ಮಾ.09 (DaijiworldNews/MB): ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗಳ ವಿರುದ್ದ ದೆಹಲಿಯ ವಿವಿಧ ಗಡಿಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಬ್ರಿಟನ್ ಸಂಸದರು ಚರ್ಚಿಸಿದ್ದು ಬ್ರಿಟನ್ ಸಂಸದರ ಈ ನಡೆಗೆ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿ ಖಂಡನೆ ವ್ಯಕ್ತಪಡಿಸಿದೆ.
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಹೈಕಮಿಷನರ್ ಕಚೇರಿ, ಬ್ರಿಟನ್ ಸಂಸದರ ಚರ್ಚೆ ಏಕಪಕ್ಷೀಯ ಹಾಗೂ ಸುಳ್ಳು ಪ್ರತಿಪಾದನೆಯನ್ನು ಒಳಗೊಂಡಿತ್ತು. ಸುಳ್ಳು ಅಂಶಗಳನ್ನು ಅವರು ಚರ್ಚಿಸಿರುವುದು ವಿಷಾಧನೀಯ ವಿಚಾರ ಎಂದು ಹೇಳಿದೆ.
ಭಾರತದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆ ಬಗ್ಗೆ ಬ್ರಿಟನ್ ಸಂಸತ್ನ ಆವರಣದಲ್ಲಿ ಚರ್ಚೆ ನಡೆದಿದ್ದು ಈ ಚರ್ಚೆ ನಡೆಸಲು 1 ಲಕ್ಷಕ್ಕೂ ಹೆಚ್ಚು ಸಹಿಯುಳ್ಳ ಇ–ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಇದನ್ನು ಹೌಸ್ ಆಫ್ ಕಾಮನ್ಸ್ ಸಮಿತಿ ಇನ್ನೂ ಅನುಮೋದಿಸಿಲ್ಲ. ಕೃಷಿ ಕಾಯ್ದೆಗಳ ವಿರುದ್ದ ರೈತರ ಪ್ರತಿಭಟನೆಯು ಭಾರತ ದೇಶದ ಆಂತರಿಕ ವಿಚಾರ ಎಂದು ಬ್ರಿಟನ್ ಆಡಳಿತಕ್ಕೆ ಹೈಕಮಿಷನರ್ ಕಚೇರಿ ಈ ಹಿಂದೆಯೇ ಹೇಳಿದೆ.