ನವದೆಹಲಿ, ಮಾ.09 (DaijiworldNews/PY): ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರು ದೆಹಲಿಯಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಲವು ಕೇಂದ್ರೀಯ ನಾಯಕರನ್ನು ಭೇಟಿಯಾಗಿದ್ದಾರೆ.
ಉತ್ತರಾಖಂಡ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಬಗೆಗಿನ ವದಂತಿಗಳು ಹೆಚ್ಚುತ್ತಿರುವ ನಡುವೆಯೇ ತ್ರಿವೇಂದ್ರ ಸಿಂಗ್ ರಾವತ್ ಅವರು ದೆಹಲಿಗೆ ತೆರಳಿ ಜೆ.ಪಿ.ನಡ್ಡಾ ಸೇರಿದಂತೆ ಹಲವು ಕೇಂದ್ರೀಯ ನಾಯಕರನ್ನು ಭೇಟಿ ಮಾಡಿದ್ದಾರೆ.
ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರೊಂದಿಗೆ ಬಿಜೆಪಿ ಉಪಾಧ್ಯಕ್ಷ ರಮಣ್ ಸಿಂಗ್ ಹಾಗೂ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಸಿಂಗ್ ಗೌತಮ್ ಅವರು ರಾಜಕೀಯ ಪರಿಸ್ಥಿತಿ ಬಗ್ಗೆ ನಡೆಸಿದ ಮಾತುಕತೆಯ ವರದಿಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ.
"ಪಕ್ಷದ ಹಿರಿಯ ನಾಯಕರು ನಾಯಕತ್ವದ ಬದಲಾವಣೆಯ ವಿಚಾರವನ್ನು ತಳ್ಳಿಹಾಕಿದ್ದಾರೆ. ಸಿಎಂ ಜೊತೆ ಉತ್ತರಾಖಂಡ ಕೆಲ ನಾಯಕರಿಗೆ ಭಿನ್ನಾಭಿಪ್ರಾಯ ಇರುವುದು ಸತ್ಯ. ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ" ಎಂದಿದ್ದಾರೆ.
"ಮಂಗಳವಾರ ಶಾಸಕಾಂಗ ಪಕ್ಷದ ಸಭೆ ನಡೆಯುವ ವಿಚಾರದ ಬಗ್ಗೆ ಅಧಿಕೃತವಾಗಿ ಪ್ರಕಟಿಸಿಲ್ಲ" ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.
ರಾಜಕೀಯ ಬೆಳವಣಿಗೆಯ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಮುನ್ನಾ ಸಿಂಗ್ ಚೌಹಾಣ್ ಅವರು, "ಈ ಬಗ್ಗೆ ಕಾದು ನೋಡಿ" ಎಂದು ತಿಳಿಸಿದ್ದಾರೆ.