ಬೆಂಗಳೂರು, ಮಾ 09 (DaijiworldNews/MS):ನನ್ನ ವಿರುದ್ದ ವ್ಯವಸ್ಥಿತ ಕುತಂತ್ರ ನಡೆದಿದ್ದು, ನನ್ನ ವಿರುದ್ದ ಷಡ್ಯಂತ್ರ ನಡೆಸಿದವರು ಎಷ್ಟೇ ಪ್ರಭಾವಿ ವ್ಯಕ್ತಿಯಾದರೂ ಅವರನ್ನು ಜೈಲಿಗೆ ಕಳುಹಿಸಿಸದೇ ಬಿಡುವುದಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸಿಡಿ ಪ್ರಕರಣ ಹೊರಬೀಳುತ್ತಿದ್ದಂತೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮಾಧ್ಯಮಗಳಿಂದ ದೂರ ಉಳಿದಿದ್ದ ರಮೇಶ್ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಟಿ ನಡೆಸಿ, ಮೊದಲು ಭಾವುಕರಾದ ಜಾರಕಿಹೊಳಿ " ಯಾವುದೇ ತನಿಖೆಗೆ ನಾನು ಸಿದ್ದವಾಗಿದ್ದು, ಇದೊಂದು 100 ಪರ್ಸೆಂಟ್ ನಕಲಿ ಸಿಡಿಯಾಗಿದೆ. ನನ್ನ ವಿರುದ್ದ ಬೆಂಗಳೂರಿನ 2 ಕಡೆ ಅಂದರೆ ಯಶವಂತಪುರದ ಕಟ್ಟಡದ 4 ಮತ್ತು 5 ನೇ ಮಹಡಿಯಲ್ಲಿ, ಹುಳಿಮಾವುವಿನಲ್ಲಿ ಷಡ್ಯಂತ್ರ ರಚಿಸಲಾಗಿದೆ ಎಂದು ಹೇಳಿದರು.
ನಾನು ನಿರಪರಾಧಿಯಾಗಿದ್ದು, ಈ ಸಿಡಿ ಬಗ್ಗೆ 4 ತಿಂಗಳ ಹಿಂದೆಯೇ ಗೊತ್ತಿತ್ತು. 26 ಗಂಟೆಯ ಮುಂಚೆಯೇ ಈ ಸಿಡಿ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ಸಿಕ್ಕಿ ನನ್ನನ್ನು ಅಲರ್ಟ್ ಮಾಡಿದ್ದರು. ನೀನು ಧೈರ್ಯವಾಗಿರು. ಯಾವುದೇ ಭಯ ಬೇಡ. ಕಾನೂನು ಹೋರಾಟ ಮಾಡೋಣ ಎಂಬುದಾಗಿ ಹೇಳಿದ್ದಾರೆ.ಆದರೆ ಆದರೆ ನಾನು ತಪ್ಪೇ ಮಾಡದೇ ಇದ್ದಾಗ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ನನ್ನ ಸಹೋದರ ಬಾಲಚಂದ್ರ ಜಾರಕಿಹೊಳಿ ಹಾಗೂ ನನ್ನ ರಾಜಕೀಯ ಸ್ನೇಹಿತರಲ್ಲಿ ಹೇಳಿಕೊಂಡಿದ್ದೆ.ನಾನು ಬಹಳ ದುಖದಲ್ಲಿದ್ದೇನೆ. ಸಿಡಿ ಬಿಡುಗಡೆ ಆಗಿದ್ದ ದಿನವೇ ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆಯುತ್ತಿದ್ದೆ. ನಾನು ತಪ್ಪು ಮಾಡಿದ್ರೇ.. ಆ ತಾಯಿಯೇ ಶಿಕ್ಷೆ ವಿಧಿಸಲಿ.
ಆದರೆ ಈ ರೀತಿಯ ಹೊಲಸು ನಕಲಿ ಸಿಡಿ ತಂದು ನನ್ನ ಕುಟುಂಬದ ಮಾರ್ಯಾದೆ ಹರಾಜು ಹಾಕಲಿದ್ದಾರೆ ಎಂದು ನನಗೆ ತಿಳಿಯಲಿಲ್ಲ. ರಾಜಕಾರಣ, ಮಂತ್ರಿ ಪದವಿ ಇದ್ಯಾವುದು ಶಾಶ್ವತವಲ್ಲ. ಆದರೆ ನನ್ನ ಕುಟುಂಬ ಮಾನ ಮರ್ಯಾದೆ ಗೌರವವನ್ನು ಹಾಳು ಕೆಡವಿದವರನ್ನು ಮಾತ್ರ ಸುಮ್ಮನೆ ಬಿಡೋದಿಲ್ಲ. ವಿಡಿಯೋದಲ್ಲಿರುವ ಯುವತಿಗೆ 50 ಲಕ್ಷ ರೂ. ಅಲ್ಲ, 5 ಕೋಟಿ ರೂ. ನೀಡಿರುವ ಮಾಹಿತಿ ಇದೆ. ವಿದೇಶದಲ್ಲಿ 2 ಫ್ಲ್ಯಾಟ್ ನೀಡಿರುವ ಮಾಹಿತಿ ಇದೆ. ನನ್ನ ವಿರುದ್ಧ ದೊಡ್ಡ ಷಡ್ಯಂತ್ರ ಮಾಡಲಾಗಿದೆ. ನನ್ನ ವಿರುದ್ದ ಹತ್ತಾರು ಕೋಟಿ ರೂ ಖರ್ಚು ಮಾಡಿ ಷಡ್ಯಂತ್ರ ನಡೆಸಲಾಗಿದ್ದು , ಅವರ ವಿರುದ್ದ ಹೋರಾಟ ಮಾಡಿ, ಜೈಲಿಗೆ ಕಳುಹಿಸದೆ ಬಿಡುವುದಿಲ್ಲ" ಎಂದು ಜಾರಕಿಹೊಳಿ ಗುಡುಗಿದ್ದಾರೆ.
ಇದೇ ವೇಳೆ ಸಿಡಿ ಬಿಡುಗಡೆಯಾದ ನಂತರ ನನ್ನ ಬೆನ್ನಿಗೆ ನಿಂತು ಮಾನಸಿಕವಾಗಿ ದೈರ್ಯ ತುಂಬಿದ ಎಲ್ಲಾ ನಾಯಕರು ಅದರಲ್ಲೂ ವಿಶೇಷವಾಗಿ ಕುಮಾರಸ್ವಾಮಿ ಅವರಿಗೆ ನನ್ನ ಧನ್ಯವಾದ ಎಂದು ಹೇಳಿದ್ದಾರೆ.