ಕೋಲ್ಕತ್ತಾ, ಮಾ.09 (DaijiworldNews/MB): ಕೋಲ್ಕತಾದ ಪೂರ್ವ ರೈಲ್ವೆ ಮುಖ್ಯ ಕಚೇರಿಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಸಜೀವವಾಗಿ ದಹನಗೊಂಡ ನಾಲ್ವರು ಅಗ್ನಿಶಾಮಕದಳದ ಸಿಬ್ಬಂದಿಗಳು ಸೇರಿ 9 ಮಂದಿಯ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಈ ಬಗ್ಗೆ ಪ್ರಧಾನಿ ಕಚೇರಿ (ಪಿಎಂಒ) ಮಾಹಿತಿ ನೀಡಿದ್ದು, ಕೋಲ್ಕತ್ತಾದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ. ಹಾಗೂ ಗಂಭೀರವಾಗಿ ಗಾಯಗೊಂಡವರಿಗೆ 50,000 ರೂ. ನೀಡಲು ಅನುಮೋದಿಸಿರುವುದಾಗಿ ತಿಳಿಸಿದೆ.
ಸ್ಟ್ರಾಂಡ್ ರೋಡ್ನ ಪೂರ್ವ ರೈಲ್ವೆ ಕೇಂದ್ರ ಕಚೇರಿಯಲ್ಲಿ ಅಗ್ನಿದುರಂತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದರು. ಆದರೆ ದುರದೃಷ್ಟವಶಾತ್ ರಕ್ಷಣೆಗೆ ಧಾವಿಸಿದ ಸಿಬ್ಬಂದಿಗಳಲ್ಲಿ ನಾಲ್ವರು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಒಟ್ಟು 9 ಮಂದಿ ಸಜೀವವಾಗಿ ದಹನಗೊಂಡಿದ್ದಾರೆ.
ಈ ಬಗ್ಗೆ ಸಂತಾಪ ವ್ಯಕ್ತಪಡಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ''ಕೋಲ್ಕತ್ತಾದಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಪ್ರಾಣಹಾನಿಯಾಗಿರುವ ಸುದ್ದಿ ಕೇಳಿ ಬೇಸರವಾಗಿದೆ. ದುಃಖದ ಈ ಸಂದರ್ಭದಲ್ಲಿ ನಾವು ದುಃಖಿತ ಕುಟುಂಬಗಳೊಂದಿಗೆ ಇರುವೆವು. ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ'' ಎಂದು ಹೇಳಿದ್ದಾರೆ.
''ಇದು ಹಳೆಯ ಕಟ್ಟಡವಾಗಿದ್ದು, ಪೂರ್ವ ರೈಲ್ವೆಯ ಟಿಕೆಟ್ ಬುಕಿಂಗ್ ಕಚೇರಿಗಳನ್ನು ಒಳಗೊಂಡಿತ್ತು. ಇದೊಂದು ಅತ್ಯಂತ ದುಃಖಕರ ಘಟನೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ'' ಎಂದು ಈಗಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.