ಬೆಂಗಳೂರು, ಮಾ.09 (DaijiworldNews/PY): ಗೋವಿಂದಪುರ ಡ್ರಗ್ ಕೇಸ್ಗೆ ಸಂಬಂಧಪಟ್ಟಂತೆ ಕೆಂಪೇಗೌಡ 2 ಚಿತ್ರ ನಿರ್ಮಾಪಕ ಶಂಕರ್ ಗೌಡ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಸಂಜಯನಗರದ ಡಾಲರ್ಸ್ ಕಾಲೋನಿಯಲ್ಲಿರುವ ಆರ್ಎಂವಿ ಬಳಿಯ ನಾಲ್ಕು ಅಂತಸ್ತಿನ ಕಟ್ಟಡದಲ್ಲಿರುವ ಕಚೇರಿ ಮೇಲೆ ಪೂರ್ವ ವಿಭಾಗದ ಬಾಣಸವಾಡಿ ಎಸಿಪಿ ಲಿಂಗಪ್ಪ ಬಿ.ಸಕ್ರಿ ಹಾಗೂ ಗೋವಿಂದಪುರ ಠಾಣೆ ಇನ್ಸ್ಟೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ವಿದೇಶಿ ಡ್ರಗ್ ಪೆಡ್ಲರ್ನೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆ ಈ ದಾಳಿ ನಡೆದಿದೆ.
ದಾಳಿ ಸಂದರ್ಭ ಶಂಕರ್ ಗೌಡ ಹಾಗೂ ಮೂವರು ಸಿಬ್ಬಂದಿಗಳು ಕಛೇರಿಯಲ್ಲಿದ್ದರು. ಎಲ್ಲರ ಮೊಬೈಲ್ ಹಾಗೂ ಹಾರ್ಡ್ ಡಿಸ್ಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಕಛೇರಿಯ ಕೊಠಡಿ, ಕಾರುಗಳನ್ನು ಪರಿಶೀಲನೆ ಮಾಡುತ್ತಿದ್ದು, ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಗ್ಬಾಸ್ ಖ್ಯಾತಿಯ ಮಸ್ತಾನ್ ಚಂದ್ರ ಅವರನ್ನು ಇತ್ತೀಚೆಗೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆಯ ಸಂದರ್ಭ ಶಂಕರ್ ಗೌಡ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಎಂದು ತಿಳಿಸಿದ್ದರು. ಈ ಹಿನ್ನೆಲೆ ಶಂಕರ್ ಗೌಡ ಅವರ ಕಚೇರಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.