ಬೆಂಗಳೂರು, ಮಾ 09 (DaijiworldNews/MS): ರಾಸಲೀಲೆ ಸಿಡಿ ಪ್ರಕರಣದ ಬಳಿಕ ನಿಗೂಢವಾಗಿದ್ದ ರಮೇಶ್ ಜಾರಕಿಹೊಳಿ ಪ್ರಕರಣ ಬೆಳಕಿಗೆ ಬಂದ ಬಳಿಕ ಇದೇ ಮೊದಲ ಬಾರಿಗೆ ಇಂದು ಪತ್ರಿಕಾಗೋಷ್ಟಿ ನಡೆಸಲಿದ್ದು, ಇದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಸಿಡಿ ಪ್ರಕರಣ ಹೊರಬೀಳುತ್ತಿದ್ದಂತೆಯೇ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮಾಧ್ಯಮಗಳಿಂದ ದೂರ ಉಳಿದಿದ್ದ ಜಾರಕಿಹೊಳಿ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಬೆಳಗ್ಗೆ 10 ಗಂಟೆಗೆ ಸುದ್ದಿಗೋಷ್ಟಿ ನಡೆಸಲಿದ್ದಾರೆ
ರಮೇಶ್ ಜಾರಕಿಹೊಳಿ ಅವರು ಕರೆದಿರುವ ಸುದ್ಧಿಗೋಷ್ಠಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದು ಅವರ ಮುಂದಿನ ನಡೆ ಹಾಗೂ ಕಾನೂನು ಹೋರಾಟದ ಬಗ್ಗೆ ತಿಳಿಸಬಹುದು ಎನ್ನಲಾಗಿದೆ.
ಸೋಮವಾರ ರಮೇಶ್ ಸಹೋದರ , ಬಾಲಚಂದ್ರ ಜಾರಕಿಹೊಳಿ ಅವರು " ರಮೇಶ್ ಜಾರಕಿಹೊಳಿ ಅವರ ಹನಿಟ್ರಾಪ್ ನ ವಿಫಲ ಪ್ರಯತ್ನದ ನಂತರ, 17 ಸರ್ವರ್ಗಳಲ್ಲಿ ವೀಡಿಯೊ ಅಪ್ಲೋಡ್ ಮಾಡಲು ಹಾಗೂ ರಷ್ಯಾದಿಂದ ನಕಲಿ ವೀಡಿಯೊವನ್ನು ಬಿಡುಗಡೆ ಮಾಡಲು ಸುಮಾರು 15 ಕೋಟಿ ರೂ ಕೃತ್ಯಕ್ಕೆ ಬಳಸಲಾಗಿದೆ . ಅಲ್ಲದೆ, ದುಬೈನಲ್ಲಿ ಯುವತಿಗೆ ಉದ್ಯೋಗ ಆಮಿಷ ವನ್ನು ತೋರಿ ರೂ.50 ಲಕ್ಷ ಹಣದ ನೀಡಿ ಕೃತ್ಯಕ್ಕೆ ಬಳಸಲಾಗಿದೆ" ಎಂದು ದೂರಿದ್ದರು.