ಕೋಲ್ಕತ್ತಾ, ಮಾ 09 (DaijiworldNews/MS):ಕೋಲ್ಕತಾದ ಪೂರ್ವ ರೈಲ್ವೆ ಮುಖ್ಯ ಕಚೇರಿಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ 9 ಮಂದಿ ಸಜೀವವಾಗಿ ದಹಿಸಿರುವ ಘಟನೆ ನಡೆದಿದೆ.
ಸ್ಟ್ರಾಂಡ್ ರೋಡ್ನ ಪೂರ್ವ ರೈಲ್ವೆ ಕೇಂದ್ರ ಕಚೇರಿಯಲ್ಲಿ ಅಗ್ನಿದುರಂತ ಸಂಭವಿಸುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಆದರೆ ದುರದೃಷ್ಟವಶಾತ್ ರಕ್ಷಣೆಗೆ ಧಾವಿಸಿದ ಸಿಬ್ಬಂದಿಗಳಲ್ಲಿ ನಾಲ್ವರು ಈ ದುರಂತದಲ್ಲಿ ಸಾವಿಗೀಡಾಗಿದ್ದಾರೆ.
ಸೋಮವಾರ ಸಂಜೆ 6.10ರ ಸುಮಾರಿಗೆ 14 ಮಹಡಿಗಳ ನ್ಯೂ ಕೌಲಿಘಟ್ ಕಟ್ಟಡದ 13ನೇ ಮಹಡಿಯಲ್ಲಿ ಭಾರಿ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ದುರಂತ ಸಂಭವಿಸುತ್ತಿದ್ದಂತೆಯೇ ಕೆಳಗಡೆ ಹೋಗಲು ಲಿಫ್ಟ್ ಬಳಸಲು ಶುರು ಮಾಡಿದರು. ಈ ಹಿನ್ನೆಲೆಯಲ್ಲಿ ಅದರೊಳಗೆ ಸಿಲುಕಿ ಮೃತಪಟ್ಟಿದ್ದಾರೆ. ಘಟನೆಯಲ್ಲಿಅಗ್ನಿಶಾಮಕ ದಳದ ನಾಲ್ವರು ಸಿಬ್ಬಂದಿ, ಪೊಲೀಸ್ ಅಧಿಕಾರಿ ರೈಲ್ವೆ ಅಧಿಕಾರಿ ಹಾಗೂ ಭದ್ರತಾ ಅಧಿಕಾರಿ ಸಾವನ್ನಪ್ಪಿದ್ದಾರೆ.
ಮೃತಪಟ್ಟ 9 ಮಂದಿಯ ಪೈಕಿ ಐದು ಮಂದಿಯ ಮೃತದೇಹವು 12ನೇ ಮಹಡಿಯಲ್ಲಿದ್ದ ಲಿಫ್ಟ್ನಲ್ಲಿ ಪತ್ತೆಯಾಗಿದೆ. ಲಿಫ್ಟ್ ಒಳಗೆ ಇದ್ದವರು ಉಸಿರುಗಟ್ಟಿ ಹಾಗೂ ಬೆಂಕಿಯ ಜ್ವಾಲೆಗೆ ಸುಟ್ಟು ಜೀವ ಕಳೆದುಕೊಂಡಿದ್ದಾರೆ. ಅಗ್ನಿ ಆಕಸ್ಮಿಕ ಸಂಭವಿಸಿದ ತಕ್ಷಣ 25 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ ಕಟ್ಟಡ ಎತ್ತರವಿದ್ದ ಕಾರಣ ಬೆಂಕಿ ನಂದಿಸುವ ಕಾರ್ಯಕ್ಕೆ ತೀವ್ರ ಹಿನ್ನಡೆಯಾಯಿತು.
ಇದು ಹಳೆಯ ಕಟ್ಟಡವಾಗಿದ್ದು, ಪೂರ್ವ ರೈಲ್ವೆಯ ಟಿಕೆಟ್ ಬುಕಿಂಗ್ ಕಚೇರಿಗಳನ್ನು ಒಳಗೊಂಡಿತ್ತು. ಇದೊಂದು ಅತ್ಯಂತ ದುಃಖಕರ ಘಟನೆಯಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಅಗ್ನಿದುರಂತ ಸಂಭವಿಸಿದಾಗ ಲಿಫ್ಟ್ ದಯವಿಟ್ಟು ಬಳಸಬೇಡಿ ಎಂದು ಮಮತಾ ಹೇಳಿದ್ದಾರೆ. ಮೃತ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಹಾಗೂ ಕುಟುಂಬದ ಓರ್ವ ವ್ಯಕ್ತಿಗೆ ಸರ್ಕಾರಿ ಕೆಲಸ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ. ರೈಲ್ವೆ ಇಲಾಖೆಯ ಕಟ್ಟಡ ನಿರ್ಮಾಣದಲ್ಲಿಯೇ ದೋಷ ಇರುವ ಸಾಧ್ಯತೆ ಇದ್ದು, ಅದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.