ಬೆಂಗಳೂರು, ಮಾ. 08 (DaijiworldNews/SM): ಬಿಜೆಪಿ ಸರಕಾರ ಮಂಡಿಸಿರುವ ಬಜೆಟ್ ನಲ್ಲಿ ಯಾವುದೇ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿ ಸರಕಾರ ಅನೈತಿಕವಾಗಿದ್ದು, ಈ ಸರಕಾರದ ಬಜೆಟ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಜೆಟ್ ಅನ್ನು ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ. ಯಡಿಯೂರಪ್ಪ ಬಜೆಟ್ ಪುಸ್ತಕ ಓದುವಾಗ ನಾವು ಇರಲಿಲ್ಲ. ಈ ನಡುವೆ ಯಡಿಯೂರಪ್ಪನವರು ಬಜೆಟ್ ಮಂಡಿಸಿದ್ದಾರೆ. ಬಳಿಕ ಬಜೆಟ್ ಪುಸ್ತಕ ನೋಡಿದಾಗ ಅದು ಅಭಿವೃದ್ಧಿಗೆ ಪೂರಕವಲ್ಲದ ಎಂಬುವುದು ಸ್ಪಷ್ಟಗೊಂಡಿದೆ ಎಂದು ಅವರು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಹಿಂದೆ ಪಾರದರ್ಶಕವಾಗಿ ಇಲಾಖೆಗೆ ಇಷ್ಟು ಮೀಸಲಿಡಲಾಗಿದೆ ಎಂದು ಸ್ಪಷ್ಟವಾಗಿ ಇಲಾಖೆಯ ಹೆಸರನ್ನು ಉಲ್ಲೇಖಿಸಲಾಗುತ್ತಿತ್ತು. ಆದರೆ ಯಡಿಯೂರಪ್ಪ ಬಜೆಟ್ ಅನ್ನು ಆರು ವಲಯಗಳಾಗಿ ವಿಭಾಗಿಸಿಸಿ ಯಾವ ಇಲಾಖೆಗೆ ಎಷ್ಟು ಕೊಟ್ಟಿದ್ದಾರೆ ಎಂಬ ಅಂಕಿ ಅಂಶಗಳನ್ನೂ ತಿಳಿಸದೆಯೇ ಬಜೆಟ್ ಅನ್ನು ಬಿಚ್ಚಿಡುವುದಕ್ಕಿಂತ ಗೌಪ್ಯವಾಗಿ ಮಾಹಿತಿಯನ್ನು ಮುಚ್ಚಿಡುವುದನ್ನೇ ಮಾಡಿದ್ದಾರೆ ಎಂದು ಅರೋಪಿಸಿದ್ದಾರೆ.