ಉತ್ತರಾಖಂಡ್, ಮಾ.08 (DaijiworldNews/MB): ಐದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಹತ್ಯೆಗೈದ ಆರೋಪದಲ್ಲಿ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವ ಉತ್ತರಾಖಂಡ್ನ ಪೋಸ್ಕೋ ಕೋರ್ಟ್, ಆತನ ಪೋಷಕರಿಗೂ ಜೈಲು ಶಿಕ್ಷೆ ವಿಧಿಸಿದೆ.
2019ರ ಫೆಬ್ರವರಿ 19ರಂದು ಯುಎಸ್ ನಗರದ ರುದ್ರಪುರ ಟ್ರಾನ್ಸಿಟ್ ಕ್ಯಾಂಪ್ ಕಾಲೋನಿಯಲ್ಲಿ ಐದು ವರ್ಷದ ಮಗು ನಾಪತ್ತೆಯಾಗಿದ್ದು ಈ ಬಗ್ಗೆ ದೂರು ದಾಖಲು ಮಾಡಲಾಗಿತ್ತು. ಈ ಮಗು ಇದ್ದ ಮೇಲ್ಛಾವಣಿಯಲ್ಲಿ ಆರೋಪಿ ಹರ್ಸ್ವರೂಪ್ ಇದ್ದ ಆತ ವಾಟರ್ ಟ್ಯಾಂಕ್ನ ಮುಚ್ಚಳವನ್ನು ತೆಗೆಯುತ್ತಿದ್ದ ಎಂದು ದೂರುದಾರರು ಆರೋಪ ಮಾಡಿದ್ದರು.
ಈ ದೂರಿನ ಆಧಾರದಲ್ಲಿ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ ಪೊಲೀಸರು ಆತನ ಮನೆಯಲ್ಲಿಯೇ ಮಗುವಿನ ಮೃತ ದೇಹವಿದ್ದ ಬ್ಯಾಗ್ ಅನ್ನು ಪತ್ತೆಹಚ್ಚಿದ್ದರು. ಈ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಳಿಕ ಹರ್ಸ್ವರೂಪ್ನ ಪೋಷಕರನ್ನೂ ಬಂಧಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ ವಿಶೇಷ ನ್ಯಾಯಾಧೀಶೆ ವಿಜಯಲಕ್ಷ್ಮೀ ವಿಹಾನ್, ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದ್ದು ಆತನ ತಂದೆ ಪಾಪೂಗೆ 4 ವರ್ಷ ಜೈಲು ಹಾಗೂ ತಾಯಿ ರೂಪಾವತಿಗೆ 3 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.