ನವದೆಹಲಿ, ಮಾ.08 (DaijiworldNews/MB): ''ನಮಗೆ ಮಹಿಳೆಯರ ಮೇಲೆ ಅಧಿಕ ಗೌರವವಿದೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ಥೆಯನ್ನು ವಿವಾಹವಾಗಲು ಆರೋಪಿಗೆ ಎಂದಿಗೂ ಸೂಚಿಸಿಲ್ಲ. ವಿವಾಹವಾಗುವಿರೇ ಎಂದಷ್ಟೆ ಕೇಳಿದೆ'' ಎಂದು 14 ವರ್ಷದ ಗರ್ಭಿಣಿ ಸಂತ್ರಸ್ಥೆಯ ಅರ್ಜಿ ವಿಚಾರಣೆ ಸಂದರ್ಭ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ವಿ ರಾಮಸುಬ್ರಹ್ಮಣಿಯನ್ನು ಅವರನ್ನೊಳಗೊಂಡ ಪೀಠ ಸೋಮವಾರ ಹೇಳಿದೆ.
ಸುಪ್ರೀಂ ಕೋರ್ಟ್ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ವಿವಾಹವಾಗುವಿರಾ ಎಂದು ಕೇಳಿದ್ದು ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದು ಸಿಪಿಪಿ(ಎಂ) ಪಾಲಿಟ್ ಬ್ಯೂರೊ ಬೃಂದಾ ಕಾರೆಟ್ ಪತ್ರ ಬರೆದಿದ್ದರು. ಹಾಗೆಯೇ ಮುಖ್ಯ ನ್ಯಾಯಮೂರ್ತಿಗಳು ಕ್ಷಮೆ ಕೇಳಬೇಕೆಮದು ಅನೇಕ ಮಹಿಳಾ ಪರ ಹೋರಾಟಗಾರರು, ಪ್ರಗತಿಪರ ಚಿಂತಕರು ಬಹಿರಂಗವಾಗಿ ಪತ್ರ ಬರೆದಿದ್ದರು.
ಅಂತರರಾಷ್ಟ್ರೀಯ ಮಹಿಳಾ ದಿನವಾದ ಇಂದು ಸುಪ್ರೀಂಕೋರ್ಟ್ ಹೇಳಿಕೆಯನ್ನು ಬೆಂಬಲಿಸಿದ ಬಾರ್ ಕೌನ್ಸಿಲ್, ಮಹಿಳೆಯರ ಮೇಲೆ ನಮಗೆ ಹೆಚ್ಚಿನ ಗೌರವವಿದೆ. ಈ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಿದೆ.
ನ್ಯಾಯಾಲಯದ ಹೇಳಿಕೆಗಳನ್ನು ಸಂದರ್ಭಕ್ಕೆ ತಕ್ಕಂತೆ ತಿರುಚಲಾಗಿದೆ ಮತ್ತು ಸಮಾಜದ ಒಂದು ಭಾಗವು ನ್ಯಾಯಾಲಯ ಮತ್ತು ನ್ಯಾಯಾಧೀಶರನ್ನು ಗುರಿಯಾಗಿಸಿಕೊಂಡು ಹೇಳಿಕೆಯನ್ನು ತಪ್ಪಾಗಿ ತಿರುಚಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.