ಬೆಂಗಳೂರು, ಮಾ 08 (DaijiworldNews/MS): ಪ್ರಸ್ತುತ 2021-22ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಆರಂಭವಾಗಿದ್ದು, ಬಜೆಟ್ ಮಂಡನೆ ವೇಳೆ ಕಾಂಗ್ರೆಸ್ ನ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಸಭಾತ್ಯಾಗ ಮಾಡಿದ್ದಾರೆ. ಇದೇ ವೇಳೆ ಬಿಜೆಪಿ ಸದಸ್ಯರು ಇದಕ್ಸ್ಕೆ ಪ್ರತಿಯಾಗಿ ಜೈಶ್ರೀರಾಮ್ ಘೋಷಣೆಯನ್ನು ಕೂಗಿದ್ದಾರೆ.
ಈ ಬಾರಿಯ ರಾಜ್ಯ ಬಜೆಟ್ ಗಾತ್ರ 2 ಲಕ್ಷದ 43 ಸಾವಿರದ 734 ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಬಜೆಟ್ ಮಂಡಿಸಲಾಗುತ್ತಿದೆ.
ಕರ್ನಾಟಕ ಗೋ ಹತ್ಯೆ ನಿಯಂತ್ರಣ ಮತ್ತು ಜಾನುವಾರು ಸಂರಕ್ಷಣೆ (ಗೋ ಹತ್ಯೆ ನಿಷೇಧ) ಅಧಿನಿಯಮ 2020 ಈಗಾಗಲೇ ಜಾರಿಗೊಳಿಸಿದ್ದು, ಗೋಹತ್ಯೆ ನಿಷೇಧದ ಹಿನ್ನೆಲೆ ಗೋವುಗಳ ಸಂರಕ್ಷಣೆಗೆ ಬೇಕಾಗುವ ಗೋಶಾಲೆ ಹಾಗೂ ಇನ್ನಿತರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಗೋಶಾಲೆಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಸರ್ಕಾರ ತಿಳಿಸಿದ್ದು, ಇದಕ್ಕೆ ತಕ್ಕಂತೆ ಇಂದು ಮಂಡನೆಯಾದ ಬಜೆಟ್ ನಲ್ಲಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ಸ್ಥಾಪನೆಗೆ ಅನುದಾನ ಮೀಸಲಿಡಲಾಗಿದೆ.
ದೇಸಿ ತಳಿಗಳಾದ ಘೀರ್, ಸಾಹಿವಾಲ್, ವಂಗೋಲ್, ದೇವಣಿ ತಳಿಗಳ ಅಭಿವೃದ್ಧಿಗೆ ಸಮಗ್ರ ಗೋಸಂಕುಲ ಸಮೃದ್ಧಿ ಯೋಜನೆ ಹಾಗೂ ದೇಸಿ ಜಾನುವಾರು ಕುರಿ, ಮೇಕೆ, ಕುಕ್ಕುಟ ತಳಿಗಳ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ.