ಬೆಂಗಳೂರು, ಮಾ.08 (DaijiworldNews/MB): ಪ್ರಸ್ತುತ 2021-22ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ನ್ನು ಕಾಂಗ್ರೆಸ್ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಆರಂಭಿಸಿದ್ದಾರೆ. ವಿಶ್ವ ಮಹಿಳಾ ದಿನಾಚರಣೆಯಂದು ಮಂಡಿಸಲಾಗುತ್ತಿರುವ ಈ ಬಜೆಟ್ನಲ್ಲಿ ಸಿಎಂ ಬಿಎಸ್ವೈ ಅವರು ಮಹಿಳೆಯರಿಗೆ ಬಂಪರ್ ಗಿಪ್ಟ್ ನೀಡಿದ್ದಾರೆ.
ರಾಜ್ಯಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಪ್ರಸೂತಿ ರಜೆಯನ್ನು ಸರ್ಕಾರ ಘೋಷಿಸಿದೆ. ವನಿತಾ ಸಂಗತಿ ಹೆಸರಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್ ನೀಡಲಾಗುವುದು ಎಂದು ಕೂಡಾ ಬಿಎಸ್ವೈ ಬಜೆಟ್ ಮಂಡನೆ ವೇಳೆ ತಿಳಿಸಿದ್ದಾರೆ.
2 ಕೋಟಿ ರೂಪಾಯಿಗಳವರೆಗೆ ಮಹಿಳೆಯರಿಗೆ ಸಾಲ, ಶೇ.4ರಷ್ಟು ಬಡ್ಡಿದರದಲ್ಲಿ ಸಾಲ ನೀಡಲು ನಿರ್ಧಾರವನ್ನು ಕೈಗೊಂಡಿದ್ದೇವೆ. ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ಮೀಸಲಾತಿ ನೀಡಲಾಗುವುದು ಎಂದು ಬಿಎಸ್ವೈ ತಿಳಿಸಿದ್ದಾರೆ.
ರಾಜಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು. ಹಪ್ಪಳ, ಉಪ್ಪಿನ ಕಾಯಿಕಾಯಿ ತಯಾರಕರಿಗೆ ಆನ್ ಲೈನ್ ಮಾರುಕಟ್ಟೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಗೆಯೇ ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಎಲಿವೇಟ್ ವುಮೆನ್ ಕಾರ್ಯಕ್ರಮ ನಡೆಸಲಾಗುವುದು. ಉಪ್ಪಿನಕಾಯಿ ಮಾರುವ ಮಹಿಳೆಯರಿಗೆ 25 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಹೇಳಿದರು.