ಬೆಂಗಳೂರು, ಮಾ.08 (DaijiworldNews/HR): ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಬಜೆಟ್ ಮಂಡನೆಗೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
2021-22ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಮಂಡನೆ ಭಾಷಣ ಆರಂಭಿಸಲು ವಿಪಕ್ಷಗಳು ಅಡ್ಡಿ ಮಾಡುತ್ತಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.
ಸರ್ಕಾರದ ವಿರುದ್ಧ ಕಿಡಿಕಾರಿರುವ ಸಿದ್ದರಾಮಯ್ಯ, "ದೇವನಹಳ್ಳಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿಯವರು ಆಟಿಸಿಫೇಟರಿ ಬೇಲ್ ನಲ್ಲಿ ಇದ್ದಾರೆ. ಈ ಬಳಿಕ 6 ಸಚಿವರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ರಮೇಶ್ ಜಾರಕಿಹೊಳಿ ಸಿಡಿ ರಿಲೀಸ್ ಬಳಿಕ ಭಯದಿಂದ ತಮ್ಮ ವಿರುದ್ಧದ ಯಾವುದೇ ಸುದ್ದಿ ಪ್ರಸಾರ ಮಾಡದಂತೆ ತಡೆ ತಂದಿದ್ದಾರೆ. ಯಾಕೆ ಭಯದಿಂದ ಓಡಿ ಹೋಗಬೇಕು. ಹೀಗೆ ಹೋಗಿದ್ದಾರೆ ಅಂದ್ರೇ ಅದರ ಹಿಂದೆ ಏನೋ ಇರಬೇಕು. ಅದಕ್ಕೆ ಭಯಗೊಂಡಿದ್ದಾರೆ. ಇಂತಹ ಸರ್ಕಾರಕ್ಕೆ ಬಜೆಟ್ ಮಂಡಿಸುವ ನೈತಿಕತೆಯೇ ಇಲ್ಲ" ಎಂದಿದ್ದಾರೆ.
ಇನ್ನು ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ಸಾರ್ವಜನಿಕರ ಹಣವನ್ನು ನೈತಿಕತೆಯಿಲ್ಲದ ಸರ್ಕಾರ ಕೈಯಲ್ಲಿ ಇಟ್ಟು ಬಜೆಟ್ ಮಂಡನೆಗೆ ಅವಕಾಶ ನೀಡೋದಿಲ್ಲ ಎಂಬುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.