ಬೆಂಗಳೂರು,ಮಾ.08 (DaijiworldNews/HR): "ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ, ಸುರಕ್ಷತೆ ಮತ್ತು ಸಮಾನ ಅವಕಾಶ ಕಲ್ಪಿಸುವುದೇ ನಮ್ಮ ಸರ್ಕಾರದ ಗುರಿ" ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಾಡಿನ ಸಮಸ್ತ ತಾಯಂದಿರಿಗೆ ಮತ್ತು ಸಹೋದರಿಯರಿಗೆ ಶುಭಾಶಯಗಳನ್ನು ಕೋರಿ ಟ್ವೀಟ್ ಮಾಡಿರುವ ಅವರು, "ಈ ಅಂತಾರಾಷ್ಟ್ರೀಯ ಮಹಿಳಾ ದಿನದಂದು, ನಮ್ಮ ನಾರಿಶಕ್ತಿಯ ಧೈರ್ಯ, ಪರಿಶ್ರಮ, ಸಾಧನೆಗಳನ್ನು ಸಂಭ್ರಮಿಸೋಣ. ಅಭಿವೃದ್ಧಿಯ ಪಥದಲ್ಲಿ ಎಲ್ಲರನ್ನೂ ಹಿಂದಿಕ್ಕಿ, ಸಾಧಿಸುತ್ತಿರುವ ಮಹಿಳೆಯರು ಸಮಾಜದ ಹೆಮ್ಮೆಯಾಗಿದ್ದಾರೆ. ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲಿ ಸಕಾರಾತ್ಮಕ ಪರಿವರ್ತನೆ, ಸುರಕ್ಷತೆ ಮತ್ತು ಸಮಾನ ಅವಕಾಶ ಕಲ್ಪಿಸುವುದೇ ನಮ್ಮ ಸರ್ಕಾರದ ಗುರಿ" ಎಂದು ಹೇಳಿದ್ದಾರೆ.
ಇನ್ನು "ಇಂದು ಅಧಿವೇಶನದಲ್ಲಿ 2021-22ನೇ ಸಾಲಿನ ಆಯವ್ಯಯ ಪತ್ರವನ್ನು ನಾನು ಮಂಡಿಸಲಿದ್ದು, ಮುಂಜಾನೆ ಎಂದಿನಂತೆ ದೇವರಿಗೆ ಪೂಜೆ ಸಲ್ಲಿಸಿ, ಬಜೆಟ್ ಮಂಡನೆ ಹಿನ್ನಲೆಯಲ್ಲಿ ಆಶೀರ್ವಾದವನ್ನು ಕೋರಿ, ರಾಜ್ಯದ ಸಮಸ್ತ ಜನತೆಯ ಏಳಿಗೆಗಾಗಿ ಪ್ರಾರ್ಥಿಸಲಾಯಿತು" ಎಂದು ಟ್ವೀಟ್ ಮಾಡಿದ್ದಾರೆ.